ಎಥೆನಾಲ್ ಮತ್ತು ಬಯೋ-ಡೀಸೆಲ್ ಸೇರಿಸದ ಪೆಟ್ರೋಲ್-ಡೀಸೆಲ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮುಂದೂಡಿಕೆ

ಹೊಸದಿಲ್ಲಿ ಅ.1: ಎಥೆನಾಲ್ ಮತ್ತು ಬಯೋ-ಡೀಸೆಲ್ ಸೇರಿಸದ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ವಿಧಿಸುವುದನ್ನು ಕೇಂದ್ರ ಸರಕಾರ ಮುಂದೂಡಿದೆ.

ಈ ಬಗ್ಗೆ ವಿತ್ತ ಸಚಿವಾಲಯ ಬಿಡುಗಡೆಗೊಳಿಸಿದ ಗಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದ್ದು, ಎಥೆನಾಲ್ ಮತ್ತು ಬಯೋ-ಡೀಸೆಲ್ ಸೇರಿಸದ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ ಲೀಟರ್ ರೂ. 2 ಹೆಚ್ಚುವರಿ ಅಬಕಾರಿ ಸುಂಕ ವಿಧಿಸುವುದನ್ನು ಕೇಂದ್ರ ಸರಕಾರ ಒಂದು ತಿಂಗಳು ಮುಂದೂಡಿದೆ. ಹಾಗೂ ಹೆಚ್ಚುವರಿ ಅಬಕಾರಿ ಸುಂಕವನ್ನು ನವೆಂಬರ್ 1, 2022 ರಿಂದ ಜಾರಿಗೊಳಿಸಲಾಗುವುದು. ಅಧಿಸೂಚನೆ ಪ್ರಕಾರ ಎಥೆನಾಲ್ ಮತ್ತು ಮೆಥನಾಲ್ ಮಿಶ್ರಣವಿಲ್ಲದ ಪೆಟ್ರೋಲ್ ಮೇಲೆ ಲೀಟರ್ ಗೆ ತಲಾ ರೂ 1.40 ಬದಲು ರೂ 3.40 ಅಬಕಾರಿ ಸುಂಕ ವಿಧಿಸಲಾಗುವುದು ಹಾಗೂ ಡೀಸೆಲ್ ಗೆ ಪ್ರಸ್ತುತ ಇರುವ ರೂ 2.60 ಅಬಕಾರಿ ಸುಂಕದ ಬದಲು ರೂ 4.60 ಸುಂಕ ವಿಧಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಈ ವರ್ಷದ ಬಜೆಟ್ ಭಾಷಣದಲ್ಲಿ ಎಥೆನಾಲ್ ಮತ್ತು ಬಯೋಡೀಸಿಲ್ ಮಿಶ್ರಣ ಮಾಡದ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರೂ 2 ಹೆಚ್ಚುವರಿ ಅಬಕಾರಿ ಸುಂಕ  ವಿಧಿಸುವ ಪ್ರಸ್ತಾವನೆ ಮಾಡಿದ್ದರು. ಅದರಂತೆ ಈ ನಿಯಮ ಇಂದಿನಿಂದ ಜಾರಿಯಾಗಬೇಕಿತ್ತು. ಆದರೆ ಒಂದು ತಿಂಗಳು ಮುಂದೂಡಲ್ಪಟ್ಟ ಕಾರಣ ನ.1 ಈ ನಿಯಮ ರಂದು ಜಾರಿಗೊಳ್ಳಲಿದೆ. ಪ್ರಸ್ತುತ ಕಬ್ಬು ಅಥವಾ ಹೆಚ್ಚುವರಿ ಆಹಾರ ಧಾನ್ಯದಿಂದ ಹೊರತೆಗೆಯಲಾದ ಎಥೆನಾಲ್ ಅನ್ನು ಪೆಟ್ರೋಲ್ ನಲ್ಲಿ ಶೇ 10 ರಷ್ಟು ಮಿಶ್ರಣ ಮಾಡಲಾಗುತ್ತಿದೆ, ಅಂದರೆ ಶೇ 90 ಪೆಟ್ರೋಲ್ ಮತ್ತು ಶೇ 10 ಎಥೆನಾಲ್ ಇರುತ್ತದೆ. ತೈಲ ಆಮದು ಮೇಲಿನ ಅವಲಂಬನೆ ಮತ್ತು ರೈತರಿಗೆ ಹೆಚ್ಚುವರಿ ಆದಾಯ ಮೂಲ ಒದಗಿಸುವ ಉದ್ದೇಶದಿಂದ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ. ಆದರೆ ದೇಶದಲ್ಲಿ ಅತ್ಯಧಿಕ ಬಳಕೆಯಾಗುವ ಇಂಧನವಾದ ಡೀಸೆಲ್ ನಲ್ಲಿ ಈ ರೀತಿಯ ಮಿಶ್ರಣವನ್ನು ಪ್ರಾಯೋಗಿಕವಾಗಿ ಮಾತ್ರ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!