ಆರ್‌ಎಸ್‌ಎಸ್ ನಂಟಿನ ಆರೋಪ ನಿರಾಕರಿಸಿದ ಬಿಜೆಪಿ ನಾಯಕ ಅಣ್ಣಾಮಲೈ
ಚೆನ್ನೈ: ಆರ್‌ಎಸ್‌ಎಸ್ ಅಂಗಸಂಸ್ಥೆಯೊಂದರಿಂದ ಯುಪಿಎಸ್‌ಸಿ ತರಬೇತಿ ಪಡೆದಿದ್ದಾರೆ ಎನ್ನುವ ಆರೋಪವನ್ನು, ಬಿಜೆಪಿ ನಾಯಕ, ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ನಿರಾಕರಿಸಿದ್ದಾರೆ.
ಅಣ್ಣಾಮಲೈ, ಕರ್ನಾಟಕದಲ್ಲಿ ತನ್ನ ಹೆಚ್ಚಿನ ಕಾರ್ಯಾವಧಿ ಕಾಂಗ್ರೆಸ್ ಹಾಗೂ ಜೆಡಿಎಸ್ ಆಡಳಿತಾವಧಿಯಲ್ಲೇ ಇತ್ತು ಎಂದಿದ್ದಾರೆ. ಅಣ್ಣಾಮಲೈ ಅವರು ಬಿಜೆಪಿ ಸೇರ್ಪಡೆಯಾದ ಬಳಿಕ, ‘ನಾಗರಿಕ ಸೇವೆಗಳಿಗೆ ಕಳುಹಿಸಲು ಅಣ್ಣಾಮಲೈ ಅವರನ್ನು ಆರ್‌ಎಸ್‌ಎಸ್ ಆಯ್ಕೆ ಮಾಡಿತ್ತು ಹಾಗೂ ಸಂಘದ ಅಂಗಸಂಸ್ಥೆಯಾಗಿರುವ ತರಬೇತಿ ಕೇಂದ್ರದಲ್ಲೇ ಅವರು ಯುಪಿಎಸ್‌ಸಿ ತರಬೇತಿ ಪಡೆದಿದ್ದರು’ ಮುಂತಾದ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕಾರಣದಿಂದ ಅಣ್ಣಾಮಲೈ ಸ್ಪಷ್ಟನೆ ನೀಡಿದ್ದಾರೆ.
‘ನನ್ನ ಸಂದರ್ಶನ ಹಾಗೂ ಆಯ್ಕೆ ನಡೆದಿದ್ದು, 2010–11ರಲ್ಲಿ. ಅಂದು ಯುಪಿಎ ಸರ್ಕಾರ ಆಡಳಿತದಲ್ಲಿ ಇತ್ತು. ನನ್ನ ತರಬೇತಿಯೂ ಯುಪಿಎ ಸರ್ಕಾರದ ಅವಧಿಯಲ್ಲೇ ನಡೆದಿದೆ. ನಾನು ಕೇವಲ ಆಯ್ಕೆಯಾಗಿದ್ದು ಮಾತ್ರವಲ್ಲ, ಐಪಿಎಸ್ ತರಬೇತಿ ಟಾಪರ್ ಆಗಿದ್ದೆ. 64 ಆರ್‌ಆರ್ ಬ್ಯಾಚ್‌ನಲ್ಲಿ ಎರಡನೇ ಸ್ಥಾನದಲ್ಲಿ ಇದ್ದೆ. ತರಬೇತಿ ಸಂದರ್ಭದಲ್ಲಿ ನನ್ನ ನಾಯಕತ್ವ ಗುಣಕ್ಕೆ ಚಿನ್ನದ ಪದಕ ದೊರೆತಿತ್ತು. ಮಸ್ಸೂರಿಯಲ್ಲಿ ನಡೆದ ಜಂಟಿ ತರಬೇತಿ ಸಂದರ್ಭದಲ್ಲಿ ಐಎಎಸ್, ಐಪಿಎಸ್ ಹಾಗೂ ಐಎಫ್‌ಎಸ್ ಅಧಿಕಾರಿಗಳೇ ನನ್ನನ್ನು ಆಯ್ಕೆ ಮಾಡಿದ್ದರು. ನಾನು ಯಾವುದೇ ಪಕ್ಷ ಅಥವಾ ಸಂಘ ಸಂಸ್ಥೆಯಡಿ ತರಬೇತಿ ಕೇಂದ್ರಗಳಿಗೆ ಹೋಗಿಲ್ಲ. ಪರೀಕ್ಷೆಗೆ ನಾನಾಗಿಯೇ ತಯಾರಾಗಿದ್ದೆ’ ಎಂದು ಅಣ್ಣಾಮಲೈ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಸೇವೆಯಲ್ಲಿದ್ದ ವೇಳೆ ಕೇವಲ ನಾಲ್ಕು ದಿನ ಬಿಜೆಪಿ ಆಡಳಿತದಡಿ ಕಾರ್ಯನಿರ್ವಹಿಸಿದ್ದೆ. ಆರು ವರ್ಷ ಕಾಂಗ್ರೆಸ್ ಸರ್ಕಾರದಡಿ ಹಾಗೂ 1 ವರ್ಷ ಜೆಡಿಎಸ್ ಸರ್ಕಾರದಡಿ ಕಾರ್ಯನಿರ್ವಹಿಸಿದ್ದೆ. ಸಿದ್ದರಾಮಯ್ಯನವರೇ ಕರಾವಳಿ ಕರ್ನಾಟಕಕ್ಕೆ ಹಾಗೂ ಬೆಂಗಳೂರು ನಗರಕ್ಕೆ ಎಚ್.ಡಿ.ಕುಮಾರಸ್ವಾಮಿಯವರು ನನ್ನನ್ನು ನಿಯೋಜಿಸಿದ್ದರು ಎಂದಿದ್ದಾರೆ.