ಸಾಮಾಜಿಕ ಮತ್ತು ರಾಜಕೀಯ ಮಾರ್ಗದರ್ಶಕರಾಗಿದ್ದ ಮಂಜುನಾಥ್: ಸೊರಕೆ

ಉಡುಪಿ: ಶಾರೀರಿಕ ಆರೋಗ್ಯವು ಅತ್ಯವಶ್ಯ ಎಂದು ಮನಗಂಡಿದ್ದ ಮಂಜುನಾಥ ಉದ್ಯಾವರ್ ಅವರು ಜಿಲ್ಲಾಸ್ಪತ್ರೆಯ ಬ್ಲಡ್ ಬ್ಯಾಂಕ್‍ಗೋಸ್ಕರ ರಕ್ತದಾನ ಶಿಬಿರದ ಮೂಲಕ ರಕ್ತ ಸಂಗ್ರಹಣೆ ಮಾಡಿ ಕೊಡುತ್ತಿದ್ದರು. ರಾಜಕೀಯ ಮುಖಂಡರಿಗೂ, ಸಾಮಾಜಿಕ ಸಹಿತ ಎಲ್ಲಾ ಕೆಲಸಗಳಿಗೂ ಉತ್ತಮ ಮಾರ್ಗದರ್ಶಕರಾಗಿ ಇದ್ದುದರಿಂದ ಇಂದಿಗೂ ಸ್ಮರಣೀಯರಾಗಿ ಜನಮಾನಸದಲ್ಲಿ ಉಳಿದಿದ್ದಾರೆ.

ಹಿರಿಯ ನಾಯಕರಾದ ಓಸ್ಕರ್ ಫೆರ್ನಾಂಡಿಸ್ ರವರ ನಿಕಟವರ್ತಿಯಾಗಿ ಇದ್ದ ಇವರ ಮಾರ್ಗದರ್ಶನವನ್ನು  ಅವಿಭಾಜಿತ ಜಿಲ್ಲೆಯ ಕಾಂಗ್ರೆಸ್ ಪಕ್ಷದ ನಾಯಕರುಗಳು ಪಡೆಯುತ್ತಿದ್ದರು. ತನ್ನ ಹೆಸರಿನೊಂದಿಗೆ ಇದ್ದ ಉದ್ಯಾವರದ ಅಭಿವೃದ್ದಿಯ ಕನಸನ್ನು ಸದಾ ಕಾಣುತ್ತಿದ್ದ ಮಂಜಣ್ಣ ಅದನ್ನು ನನಸು ಮಾಡಲು ಶ್ರಮ ವಹಿಸುತ್ತಿದ್ದರು . ಇವರ ಕ್ರಿಯಾಶೀಲ ವ್ಯಕ್ತಿತ್ವದ ನೆರವನ್ನು ನಾನು  ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಯಾಗಿರುವಾಗಲೇ ಪಡಕೊಂಡಿದ್ದೆ.

ಇವರ ಅಭಿವೃದ್ದಿಯ ಕನಸುಗಳನ್ನು ನನಸು ಮಾಡುವ ದಾರಿಯಲ್ಲಿ ನಾವು ನಡೆಯುವುದೇ ಅವರಿಗೆ ಸಲ್ಲಿಸುವ ನಿಜವಾದ ನಮನ  ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರು ಆ.30ರಂದು ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ, ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಮಂಜುನಾಥ ಉದ್ಯಾವರ  ಅವರ 8ನೇ ವರ್ಷದ ಸಂಸ್ಮರಣೆಯ ಅಂಗವಾಗಿ ಜರಗಿದ  ವೈದ್ಯಕೀಯ ನೆರವು ವಿತರಣೆ, ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೊರೊನಾ ಮಹಾಮಾರಿಯ ಸೋಂಕು ಎಲ್ಲರಲ್ಲೂ ಆತಂಕ, ಭಯದ ವಾತಾವರಣ ನಿರ್ಮಾಣ ಮಾಡಿ ಆತ್ಮವಿಶ್ವಾಸ ಕುಂದಿಸುವಂತಾಗಿದೆ. ಇದನ್ನು ಆತ್ಮವಿಶ್ವಾಸದಿಂದ ಹೊಡೆದೋಡಿಸುವ ಶಕ್ತಿಯು ನಮ್ಮದಾಗಲಿ ಅದಕ್ಕೆ ಈ ಶಿಬಿರವು ಒಂದು ಕಾರಣವಾಗಲಿ ಎಂದರು.

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್ ಮಾತನಾಡಿ ಮಂಜುನಾಥ ಉದ್ಯಾವರ್ ರವರ ಸಮಾಜ ಸೇವೆ ಮತ್ತು ರಾಜಕೀಯ ಸೇವೆಯನ್ನು ಕೇಳಿ ಬಲ್ಲೆ, ಆ ಕಾರಣಕ್ಕಾಗಿ ಅವರ ನೆನಪಲ್ಲಿ ಆಯೋಜಿದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಲು ಬಂದಿದ್ದೇನೆ. ಎರಡು ಮಾತನಾಡುವ ಅವಕಾಶ ನನ್ನದಾಯಿತು . ಹಿರಿಯ ಚೇತನ ಒಂದರ ಸಂಸ್ಮರಣೆಯಲ್ಲಿ ಭಾಗಿಯಾಗುವುದೇ ಪುಣ್ಯದ ಕೆಲಸ . ರಕ್ತದಾನ ಮಾಡಲು ವಿರಳವಾಗಿ ಬರುವ ಜನರ ಮಧ್ಯೆ ಇಲ್ಲಿ ರಕ್ತದಾನ ಮಾಡಲು ಸರತಿಯಲ್ಲಿ ನಿಂತದ್ದು ಮಂಜಣ್ಣನ ಮೇಲಿನ ಪ್ರೀತಿಯನ್ನು ತೋರಿಸುತ್ತದೆ ಎಂದರು.

ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಗಣಪತಿ ಕಾರಂತ್ ಮಾತನಾಡಿ,ತಮ್ಮ ಸಮಾಜ ಸೇವೆಯಿಂದಾಗಿ  ಅಬಾಲ ವೃದ್ಧರಾದಿಯಾಗಿ ಸ್ಮರಣೀಯರಾಗಿರುವ ಮಂಜುನಾಥ್ ಉದ್ಯಾವರ ಅವರು ಉದ್ಯಾವರದ ಕನಸುಗಾರನಾಗಿದ್ದು, ಅವರು ಉದ್ಯಾವರದ ಜನತೆಗೆ ಎಂದಿಗೂ  ಸ್ಮರಣೀಯರೇ.. ಅವರು ನಮ್ಮ ಶಾಲೆಯ ಹಳೆ ವಿದ್ಯಾರ್ಥಿಪ ಅನ್ನೋದು ನಮಗೆ ಹೆಮ್ಮೆ ತರುವ‌ ಸಂಗತಿ ಎಂದರು 
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ವೈಧ್ಯಾಧಿಕಾರಿ ಡಾ. ವೀಣಾ , ಮಾಜಿ ತಾಲೂಕು ಪಂಚಾಯತ್ ಸದಸ್ಯ ಗಿರೀಶ್ ಕುಮಾರ್ ಉಪಸ್ಥಿತರಿದ್ದರು 
ಈ ಸಂದರ್ಭದಲ್ಲಿ  ಉದ್ಯಾವರ ಗ್ರಾಮ ಪಂಚಾಯತ್  ಮಾಜಿ ಅಧ್ಯಕ್ಷರಾದ ಸುಗಂಧಿ ಶೇಖರ್ , ಸರಳಾ ಎಸ್. ಕೋಟ್ಯಾನ್ , ಚಂದ್ರಾವತಿ ಎಸ್ ಭಂಡಾರಿ, ಮಾಜಿ ಉಪಾಧ್ಯಕ್ಷರಾದ ರಿಯಾಜ್ ಪಳ್ಳಿ   ಸಂಸ್ಥೆಯ ಕೋಶಾಧಿಕಾರಿ ಸೋಮ ಶೇಖರ್ ಸುರತ್ಕಲ್, ಯು. ಶಿವರಾಯ, ಕಾಂಗ್ರೆಸ್ ಮುಖಂಡರುಗಳಾದ ಜನಾರ್ದನ ಭಂಡಾರ್ಕರ್,  ಕೀರ್ತಿ ಶೆಟ್ಟಿ ಅಂಬಲಪಾಡಿ ಉಪಸ್ಥಿತರಿದ್ದರು.


ಅಧ್ಯಕ್ಷ  ತಿಲಕ್‍ರಾಜ್ ಸಾಲ್ಯಾನ್ ಸ್ವಾಗತಿಸಿದರು. ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ ವಂದಿಸಿದರು. ರಮೇಶ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು ಈ ಕಾರ್ಯಕ್ರಮದಲ್ಲಿ ಒಂದು ಲಕ್ಷ ರೂಪಾಯಿಗಳ ವೈದ್ಯಕೀಯ ನೆರವು ಮತ್ತು ಸಹಾಯಧನ ವಿತರಿಸಲಾಯಿತು. 
ರಕ್ತದಾನ ಶಿಬಿರದಲ್ಲಿ 103 ಯುನಿಟ್ ರಕ್ತ ಸಂಗ್ರಹಿಸಲಾಯಿತು.

Leave a Reply

Your email address will not be published. Required fields are marked *

error: Content is protected !!