ಸಂಸದೆ ಶೋಭಾ ಅಭಿವೃದ್ಧಿ ಕೆಲಸಗಳ ಮೂಲಕ ಪ್ರಧಾನಿ ಮೋದಿ ಮುಖ‌ ನೋಡಿ ಮತ ನೀಡಿದ ಜನರಿಗೆ ನ್ಯಾಯ ಒದಗಿಸಲಿ- ಹರೀಶ್ ಕಿಣಿ

ಉಡುಪಿ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರನ್ನು ಸ್ವಕ್ಷೇತ್ರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಹಾಗೂ ಅಪ್ರಬುದ್ಧ ಬಾಲಿಶ ರಾಜಕಾರಣಿ ಹಾಗೂ ಚುನಾವಣೆಯಲ್ಲಿ ಸೋತ ವ್ಯಕ್ತಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನಾ ಗಣೇಶ್ ಹೇಳಿರುವುದು ಹಾಸ್ಯಾಸ್ಪದವಾಗಿದೆ ಎಂದು ಕೆಪಿಸಿಸಿ ಕೊ-ಆರ್ಡಿನೇಟರ್ ಅಲೆವೂರು ಹರೀಶ್ ಕಿಣಿ ಹೇಳಿದ್ದಾರೆ.

ಕುಯಿಲಾಡಿ ಅವರು ಎರಡು ಬಾರಿ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿ ಸೋತವರು, ನಯನಾ ಗಣೇಶ್ ಅವರೂ ಜಿಲ್ಲಾ ಪಂಚಾಯತಿಗೆ ಸ್ಪರ್ಧಿಸಿ ಸೋತವರು. ಅಷ್ಟೇ ಏಕೆ ಇಂಧನ ಸಚಿವರಾಗಿ ಭಾರೀ ಅಭಿವೃದ್ಧಿ ಮಾಡಿದ್ದರು ಎಂದು ಇದೇ ಬಿಜೆಪಿ ನಾಯಕರು ಕೊಚ್ಚಿಕೊಳ್ಳುವ ಶೋಭಾ ಕರಂದ್ಲಾಜೆ ಅವರೂ ಕೆಜೆಪಿಯಿಂದ ಸ್ಪರ್ಧಿಸಿ ಸೋತವರೇ. ಹಾಗಾಗಿ ಯುವ ನಾಯಕ ಮಿಥುನ್ ರೈ ಅವರನ್ನು ಸೋತವರು ಎಂದು ಹೀಯಾಳಿಸುವುದು ಬಿಜೆಪಿ ನಾಯಕರು ಮೇಲೆ ನೋಡಿ ಉಗಿದಂತೆ ಆಗಿದೆ.

ಗೋದಾನ, ಕೊರೊನಾ ಸಂದರ್ಭದಲ್ಲಿ ಸಾರ್ವಜನಿಕ ಸೇವೆ, ಪಿಲಿನಲಿಕೆ ಇತ್ಯಾದಿಗಳ ಮೂಲಕ ಮಿಥುನ್ ರೈ ಅವರು ಸಂಸ್ಕೃತಿ-ಸಂಸ್ಕಾರದ ರಕ್ಷಣೆಗೆ ನೀಡುತ್ತಿರುವ ಕೊಡುಗೆ ಅನನ್ಯ. ಮಿಥುನ್ ರೈ ಬಾಲಿಷ ನಾಯಕರಾದರೆ ಶೋಭಾ ವಿರುದ್ಧ ಅವರ ಒಂದೇ ಒಂದು ಹೇಳಿಕೆಗೆ ಮಂಡಲ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಬಿಜೆಪಿ ನಾಯಕರು ಪ್ರತಿ ಹೇಳಿಕೆ ನೀಡುತ್ತಿದ್ದಾರೆಂದರೆ, ಮಿಥುನ್ ಅವರ ವ್ಯಕ್ತಿತ್ವಕ್ಕೆ ಬಿಜೆಪಿಯವರು ಎಷ್ಟು ಮಹತ್ವ ನೀಡುತ್ತಾರೆಂದು ತಿಳಿಯುತ್ತದೆ. ಪ್ರತಿಪಕ್ಷದವರನ್ನು ಹಳಿಯುವ ಪ್ರಯತ್ನ ಬಿಟ್ಟು ಇನ್ನಾದರೂ ಸಂಸದೆ ಶೋಭಾ ಅಭಿವೃದ್ಧಿ ಕೆಲಸಗಳ ಮೂಲಕ ಮೋದಿ ಮುಖ‌ ನೋಡಿ ಮತ ನೀಡಿದ ಜನರಿಗೆ ನ್ಯಾಯ ಒದಗಿಸಲಿ ಎಂದು ಹರೀಶ್ ಕಿಣಿ ಆಗ್ರಹಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!