ಕೃಷಿ ಭೂಪರಿವರ್ತನೆ: ಸುಗ್ರೀವಾಜ್ಞೆಗೆ ತೀರ್ಮಾನ- ಆರ್.ಅಶೋಕ್
ಬೆಂಗಳೂರು: ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸುವ ಭೂಪರಿವರ್ತನೆ ತಿದ್ದುಪಡಿ ಮಸೂದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.
ರಾಜ್ಯದಲ್ಲಿರುವ ಲಕ್ಷಾಂತರ ಕಂದಾಯ ನಿವೇಶನಗಳನ್ನು ಭೂಪರಿವರ್ತನೆ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 95 ಕ್ಕೆ ತಿದ್ದುಪಡಿಯಿಂದ ಪರಿವರ್ತನೆಗಿದ್ದ ಅಡ್ಡಿ ಆತಂಕಗಳು ನಿವಾರಣೆ ಗೊಳ್ಳಲಿವೆ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಮಸೂದೆಗೆ ಅಂಗೀಕಾರ ಪಡೆಯಲು ಸಾಧ್ಯವಾಗಿಲ್ಲ. ಆದ್ದರಿಂದ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿದೆ ಎಂದರು.
ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಭೂಪರಿವರ್ತನೆ ಮಾಡಿಸಿಕೊಳ್ಳಲು ಅರ್ಜಿ ನೀಡಿದ 7 ದಿನಗಳಲ್ಲಿ ಅರ್ಜಿಯನ್ನು ಇತ್ಯರ್ಥಗೊಳಿಸ ಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಪರಿವರ್ತನೆಗೆ ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಅವರ ಉದ್ದೇಶಗಳಿಗೆ ಅನುಮತಿ ಸಿಗಲಿದೆ ಎಂದು ಅವರು ಹೇಳಿದರು.
ಮಸೂದೆಯ ಮುಖ್ಯ ಅಂಶಗಳು: ಮಹಾ ಯೋಜನೆ (ಮಾಸ್ಟರ್ ಪ್ಲಾನ್) ಅಥವಾ ನಗರ ಯೋಜನಾ ಪ್ರಾಧಿಕಾರದ ಮಂಜೂರಾತಿ ಅನ್ವಯ ಕೃಷಿ ಭೂಮಿ ಅಥವಾ ಅದರ ಭಾಗವನ್ನು ಯಾವುದಾದರೂ ಇತರ ಉದ್ದೇಶಕ್ಕೆ ಬಳಸಲು ಇಚ್ಚಿಸುವವರು ನಿಗದಿಪಡಿಸಿದ ದಂಡ ಪಾವತಿಸಿ ಪ್ರಮಾಣಪತ್ರ ಸಹಿತ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಹೀಗೆ ಸಲ್ಲಿಕೆಯಾದ ಅರ್ಜಿಗಳಿಗೆ ಏಳು ದಿನಗಳ ಒಳಗೆ ಜಿಲ್ಲಾಧಿಕಾರಿ ಮಂಜೂರಾತಿ ಆದೇಶ ಹೊರಡಿಸಬೇಕು. 15 ದಿನ ಕಳೆದರೂ ಜಿಲ್ಲಾಧಿಕಾರಿ ಅರ್ಜಿಗಳನ್ನು ವಿಲೇವಾರಿ ಮಾಡದಿದ್ದರೆ, ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಆಗಿದೆ ಎಂದು ಪರಿಭಾವಿಸಿಕೊಳ್ಳಬಹುದು ಎಂದು ಅಂಶ ತಿದ್ದುಪಡಿಯಾದ ಮಸೂದೆಯಲ್ಲಿದೆ.