ಕಾರ್ಕಳ: ಮೇಯಲು ಬಿಟ್ಟ ದನ ಕಳವು ಶಂಕೆ- ದೂರು ದಾಖಲು
ಕಾರ್ಕಳ ಸೆ.28 (ಉಡುಪಿ ಟೈಮ್ಸ್ ವರದಿ): ಮಿಯಾರು ಗ್ರಾಮದ ಕುಂಟಿಬೈಲು ಎಂಬಲ್ಲಿ ಮೇಯಲು ಬಿಟ್ಟಿದ್ದ ಹಸುವೊಂದು ವಾಪಸ್ಸು ಬಾರದೆ ನಾಪತ್ತೆಯಾಗಿದೆ ಎಂದು ಸ್ಥಳೀಯ ಮುರಳಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮುರಳಿ ಅವರು ಸೆ.25 ರಂದು ಎಂದಿನಂತೆ ತಮ್ಮ ಬಳಿ ಇದ್ದ ಎರಡು ದನ ಹಾಗೂ ಎರಡು ದನದ ಕರುಗಳನ್ನು ಮೇಯಲು ಬಿಟ್ಟಿದ್ದರು. ಆದರೆ ಮೇಯಲು ಬಿಟ್ಟಿದ್ದ ದನಗಳ ಪೈಕಿ ಒಂದು ದನ ವಾಪಾಸು ಬಾರದೇ ನಾಪತ್ತೆಯಾಗಿದ್ದು, ಅದನ್ನು ಮಿಯಾರು ಪರಿಸರದಲ್ಲಿ ಎಷ್ಟೇ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಈ ನಡುವೆ ಮುರಳಿ ಅವರ ಪರಿಚಯದ ರಮೇಶ್ ಆಚಾರ್ಯ ಅವರು ಅವರ ಮನೆಯ ಬಳಿಯ ರಸ್ತೆಯಲ್ಲಿ ಒಂದು ದನವನ್ನು ಬೋಲೆರೋ ವಾಹನಕ್ಕೆ ತುಂಬಿಸಿ ಕುಂಟಿಬೈಲು ಪೇಟೆ ಕಡೆ ವಾಹನ ಹೋಗಿರುವುದನ್ನು ನೋಡಿರುವುದಾಗಿ ತಿಳಿಸಿದ್ದಾರೆ. ನಾಪತ್ತೆಯಾಗಿರುವ ದನದ ಮೌಲ್ಯ 10,000 ರೂ. ಆಗಿದ್ದು, ದನವನ್ನು ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಮುರಳಿ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.