ಅ.1 ರಿಂದ ಇಂದ್ರಾಳಿ ರೈಲ್ವೇ ಸೇತುವೆ ಕಾಮಗಾರಿ- ಘನ ವಾಹನಗಳಿಗೆ ಬದಲಿ ಮಾರ್ಗ- ಜಿಲ್ಲಾಧಿಕಾರಿ ಆದೇಶ
ಉಡುಪಿ ಸೆ.28 (ಉಡುಪಿ ಟೈಮ್ಸ್ ವರದಿ): ರಾಷ್ಟ್ರೀಯ ಹೆದ್ದಾರಿ 169ಎ ಯ ಇಂದ್ರಾಳಿ ರೈಲ್ವೇ ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಈ ಮಾರ್ಗವಾಗಿ ಸಂಚರಿಸುವ ಘನ ವಾಹನಗಳಿಗೆ ಬದಲಿ ಮಾರ್ಗ ವ್ಯವಸ್ಥೆ ಮಾಡಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಆದೇಶ ಹೊರಡಿಸಿದ್ದಾರೆ.
ಇಂದ್ರಾಳಿ ರೈಲ್ವೇ ಸೇತುವೆ ಕಾಂಕ್ರಿಟೀಕರಣವು ಅ.1 ರಿಂದ ಆರಂಭಗೊಂಡು 45 ದಿನಗಳ ಕಾಲ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅ.1 ರಿಂದ ನ.11 ರ ವರೆಗೆ ಈ ಮಾರ್ಗದಲ್ಲಿ ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಬದಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಅದರಂತೆ ಘನವಾಹಗಳ ಸಂಚಾರಕ್ಕೆ ಕಲ್ಪಿಸಲಾಗಿರುವ ಬದಲಿ ಮಾರ್ಗಗಳು ಹೀಗಿವೆ.. ಕುಂದಾಪುರ ಕಡೆಯಿಂದ ಬರುವ ಘನ ವಾಹನಗಳು ಅಂಬಾಗಿಲು-ಪೆರಂಪಳ್ಳಿ-ಮಣಿಪಾಲ ರಸ್ತೆಯ ಮೂಲಕ ಚಲಿಸಬೇಕು. ಹಾಗೂ ಉಡುಪಿಯಿಂದ ಬರುವ ಘನವಾಹನಗಳು ಕಲ್ಲಂಕ ಜಂಕ್ಷನ್ ಬಳಿ ಎಡ ತಿರುವು ಪಡೆದುಕೊಂಡು ಗುಂಡಿಬೈಲು ರಸ್ತೆ ಮೂಲಕ ಎ.ವಿ ಬಾಳಿಗ ಆಸ್ಪತ್ರೆ ಬಳಿಯಿಂದ ಪೆರಂಪಳ್ಳಿ ರಸ್ತೆಯ ಮೂಲಕ ಮಣಿಪಾಲಕ್ಕೆ ಚಲಿಸಬೇಕು.
ಕಾರ್ಕಳ, ಹಿರಿಯಡ್ಕದಿಂದ ಬರುವ ಘನ ವಾಹನಗಳು ಮಣಿಪಾಲ-ಪೆರಂಪಳ್ಳಿ-ಅಂಬಾಗಿಲು ರಸ್ತೆಯ ಮೂಲಕ ಹಾಗೂ ಉಡುಪಿಯಿಂದ ಮಣಿಪಾಲಕ್ಕೆ ಚಲಿಸುವ ದ್ವಿಚಕ್ರ ವಾಹನ, ಕಾರುಗಳು ಮತ್ತು ಬಸ್ಸುಗಳು ಹಾಲಿ ಇಂದ್ರಾಳಿ ಸೇತುವೆ ಮೇಲೆ ಏಕಮುಖ ನಿರ್ಬಂಧಿತ ರೀತಿಯಲ್ಲಿ ಚಲಿಸುವಂತೆ ಸೂಚನೆ ನೀಡಲಾಗಿದೆ.