ಪಿಎಫ್ಐಗೆ ಅಕ್ರಮ ಹಣ ನೀಡುವ ವಕ್ಫ್ ಬೋರ್ಡ್ ರದ್ದುಗೊಳಿಸಿ: ಯಶ್ಪಾಲ್ ಸುವರ್ಣ
![](https://udupitimes.com/wp-content/uploads/2022/09/Screenshot_2022-09-28-14-48-29-80_c1ebbaff44ba152fb7f7c2e1f7129fd1.jpg)
ಉಡುಪಿ ಸೆ.28(ಉಡುಪಿ ಟೈಮ್ಸ್ ವರದಿ): ವಕ್ಫ್ ಅಕ್ರಮದ ಹಣವು ಪಿ.ಎಫ್.ಐ ಸಂಘಟನೆಯ ಕಾರ್ಯಕರ್ತರ ದೇಶ ದ್ರೋಹಿ ಚಟವಟಿಕೆಗಳಿಗಾಗಿ ಬಳಕೆಯಾಗುತ್ತಿದ್ದು, ಸರಕಾರ ಕೂಡಲೇ ವಕ್ಫ್ ಬೋರ್ಡ್ ರದ್ದುಗೊಳಿಸಿ ಆಸ್ತಿಯನ್ನು ವಶ ಪಡಿಸಬೇಕು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಅವರು ಹೇಳಿದ್ದಾರೆ.
ದೇಶದಾದ್ಯಂತ 5 ವರ್ಷಗಳ ಅವಧಿಗೆ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿರುವ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮತೀಯ ರಾಷ್ಟ್ರವಿರೋಧಿ ಸಂಘಟನೆಗಳನ್ನು ನಿಷೇಧಿಸುವ ಮೂಲಕ ದೇಶಪ್ರೇಮಿಗಳ ಪಾಲಿಗೆ ಕೇಂದ್ರ ಸರಕಾರ ನವರಾತ್ರಿ ಸಂದರ್ಭದಲ್ಲಿ ಶುಭ ಸುದ್ದಿ ನೀಡಿದೆ. ಶರತ್ ಮಡಿವಾಳ, ಪ್ರವೀಣ್ ನೆಟ್ಟಾರ್, ರುದ್ರೇಶ್ ಕೊಲೆ ಪ್ರಕರಣದಲ್ಲಿ ನೇರ ಭಾಗಿಯಾದ ಸಂಘಟನೆ ಕಾರ್ಯಕರ್ತರ ಹೆಡೆಮುರಿ ಕಟ್ಟಿ ಹಿಂದೂ ಕಾರ್ಯಕರ್ತರ ಕೊಲೆಗೆ ನ್ಯಾಯ ಸಲ್ಲಿಸುವ ಕಾರ್ಯ ಇದಾಗಿದ್ದು, ನರೇಂದ್ರ ಮೋದಿ ನೇತೃತ್ವಲ್ಲಿ ಗೃಹ ಸಚಿವ ಅಮಿತ್ ಷಾ ರವರ ದಿಟ್ಟ ನಿರ್ಧಾರ ಕೋಟ್ಯಾಂತರ ದೇಶಪ್ರೇಮಿಗಳಿಗೆ ಖುಷಿ ನೀಡಿದೆ ಎಂದರು.
ಉಡುಪಿ ಸರಕಾರಿ ಬಾಲಕಿಯರ ಕಾಲೇಜಿನಲ್ಲಿ ಹಿಜಾಬ್ ವಿವಾದ ಸೃಷ್ಟಿಸಿ ದೇಶದಾದ್ಯಂತ ಕೋಲಾಹಲ ಸೃಷ್ಟಿಸಿದ ಈ ಮತಾಂಧ ಶಕ್ತಿಗಳ ರಾಷ್ಟ್ರವಿರೋಧಿ ಚಟುವಟಿಕೆಯ ಬಗ್ಗೆ ಜನವರಿ ತಿಂಗಳಲ್ಲೇ ತನಿಖೆಗೆ ಆಗ್ರಹ ಮಾಡಿದ್ದೆವು. ಹೈಕೋರ್ಟ್ ತೀರ್ಪು ವಿರೋಧಿಸಿ ಬಂದ್ ಕರೆ ನೀಡಿದ ಸಂದರ್ಭದಲ್ಲೇ ಅವರ ದೇಶ ವಿರೋಧಿ ನಿಲುವು ಬಹಿರಂಗವಾಗಿತ್ತು. ಹಿಜಾಬ್ ವಿವಾದದ ವಿದ್ಯಾರ್ಥಿನಿಯರು ಭಯೋತ್ಪಾದನೆ ಸಂಘಟನೆಯ ಸದಸ್ಯೆಯರು ಎಂದು ನಾನು ಹೇಳಿದ ಮಾತಿಗೆ ಈಗ ಪುರಾವೆ ಸಿಕ್ಕಿದಂತಾಗಿದೆ. ಅಲ್ಲದೆ ಲವ್ ಜಿಹಾದ್, ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸಿ ಮುಸ್ಲಿಂ ರಾಷ್ಟ್ರಗಳ ಮೂಲಕ ಹಣ ಸಂಗ್ರಹಿಸುವ ಜಾಲವನ್ನು ಎನ್.ಐ.ಎ ತನಿಖೆ ಮೂಲಕ ಬಯಲಿಗೆಳೆದಿದ್ದು, ಈ ಮೂಲಕ ದೇಶ ವಿರೋಧಿ ಪಿ.ಎಫ್.ಐ, ಎಸ್.ಡಿ.ಪಿ.ಐ ಸಂಘಟನೆಯ ಮುಖವಾಡ ಕಳಚಿಬಿದ್ದಿದೆ ಎಂದು ಹೇಳಿದರು.
ಉಡುಪಿ ಜಿಲ್ಲೆಯ ಪ್ರಜ್ಞಾವಂತ ಜನತೆ ಈ ಮತಾಂಧ ಸಂಘಟನೆಗಳ ಬಗ್ಗೆ ಸ್ವಯಂ ಬಹಿಷ್ಕರಿಸಿ ತಕ್ಕ ಪಾಠ ಕಲಿಸಬೇಕು ಎಂದ ಅವರು, ಸದ್ಯ ಜನಸಾಮಾನ್ಯರು ಯಾರನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ನಯವಾದ ಮಾತುಗಳ ಮೂಲಕ ಸಜ್ಜನರ ಮುಖವಾಡ ಧರಿಸಿರುವ ಈ ಮತಾಂಧರೊಂದಿಗೆ ಬಹುಸಂಖ್ಯಾತ ಹಿಂದೂ ಸಮಾಜ ಎಚ್ಚರಿಕಯಿಂದಿರಬೇಕು. ಈ ಎಲ್ಲಾ ಬೆಳವಣಿಗೆಯ ಬಗ್ಗೆ ದಿವ್ಯ ಮೌನ ತಾಳಿರುವ ಕಾಂಗ್ರೆಸ್ ನಾಯಕರ ನಡೆ ಅನುಮಾನ ಸೃಷ್ಟಿಸಿದೆ. ಈ ರಾಷ್ಟ್ರವಿರೋಧಿ ಸಂಘಟನೆಗಳಿಗೆ ಪರೋಕ್ಷ ಬೆಂಬಲ ಸೂಚಿಸಿದಂತಿದೆ ಎಂದು ಆರೋಪಿಸಿದರು.
ಈ ವೇಳೆ ಗಡಿಯಾಚೆಗಿನ ಉಗ್ರರಿಗಿಂತ ದೇಶದೊಳಗಿನ ಇಂತಹ ಐಸಿಸ್ ಮನಸ್ಥಿತಿಯ ಸಂಘಟನೆಗಳೇ ದೇಶದ ಆಂತರಿಕ ಭದ್ರತೆಗೆ ದೊಡ್ಡ ಸವಾಲಾಗಿದೆ. ಬೇರೆ ಬೇರೆ ಹೆಸರಿನಿಂದ ನಾಯಿಕೊಡೆಯಂತೆ ಸೃಷ್ಟಿಯಾಗುವ ಈ ಮತೀಯ ಸಂಘಟನೆಯನ್ನು ನಿಷೇಧಕ್ಕೆ ಕೇಂದ್ರ ಸರ್ಕಾರದಿಂದ ಗಂಭೀರ ಚಿಂತನೆ ನಡೆಸಿದ್ದು, ಕಾರ್ಯಕರ್ತರ ಹಿಂದೆ ತೆರೆಮರೆಯಲ್ಲಿ ಸಹಕಾರ ನೀಡುವ ಸಮಾಜದಲ್ಲಿ ಗಣ್ಯರ ಸೋಗಿನಲ್ಲಿ ಓಡಾಡುತ್ತಿರುವ ಬಗ್ಗೆಯೂ ತನಿಖೆ ನಡೆಯಬೇಕು. ಹಾಗೂ ಕರಾವಳಿ ಜಿಲ್ಲೆಯಲ್ಲಿ ಕಗ್ಗೊಲೆಯಾದ ಹಿಂದೂ ಕಾರ್ಯಕರ್ತರ ಕೇಸ್ ಬಗ್ಗೆ ತನಿಖೆ ನಡೆಸಿ ಈ ಮತೀಯ ಸಂಘಟನೆಗಳ ಕಾರ್ಯಕರ್ತರ ಪಾತ್ರ ಶೀಘ್ರ ಬಯಲಾಗಲಿದೆ ಎಂದು ಹೇಳಿದರು.
ಇದೇ ವೇಳೆ ಮಳಲಿ ದೇವಸ್ಥಾನದ ಒಂದು ಹಿಡಿ ಮಣ್ಣು ಮುಟ್ಟಲು ಬಿಡುವುದಿಲ್ಲ ಎಂದವರನ್ನು ಇದೀಗ ರಾಷ್ಟ್ರವಿರೋಧಿ ಚಟುವಟಿಕೆ ಆರೋಪದಲ್ಲಿ ಅವರ ಮನೆಯಿಂದಲೇ ಎನ್ಐಎ ಬಂಧಿಸುತ್ತಿದೆ. ಮಂಗಳೂರಿನಲ್ಲಿ ಸಮಾವೇಶ ನಡೆಸಿ ಕೆಜಿಎಫ್ ವೈಲೆಂಟ್ ಡೈಲಾಗ್ ಹೇಳಿದ್ದ ನಾಯಕ ಇದೀಗ ಎನ್ಐಎ ಮುಂದೆ ಸೈಲೆಂಟ್ ಆಗಿದ್ದಾನೆ ಎಂದು ಟೀಕಿಸಿದರು.