ಕೇಸರಿ ಧ್ವಜ ಕಸಿದು ನೀಲಿ ಬಾವುಟ ಕೊಡಿ: ದಸಂಸ ಮುಖಂಡ ಶ್ಯಾಮರಾಜ್ ಬಿರ್ತಿ
ಉಡುಪಿ: ನಮ್ಮ ಮಕ್ಕಳು ಮೋಜಿನ ಸುಳ್ಳಿನ ಭ್ರಮೆಯ ಬಲೆಗೆ ಬಿದ್ದು ಕೇಸರಿ ಧ್ವಜ ಹಿಡಿಯುತ್ತಿದ್ದಾರೆ ಅಕ್ಕಂದಿರಾದ ತಾವು ನಿಮ್ಮ ಮಕ್ಕಳ ಕೈಯಲ್ಲಿರುವ ಕೇಸರಿ ಧ್ವಜ ಕಸಿದು ನಮ್ಮ ಆಸ್ಮಿತೆಯ ಸಂಕೇತವಾದ ನೀಲಿ ಬಾವುಟ ಅವರ ಕೈಗೆ ಕೊಡೀ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ದಲಿತ ಮಹಿಳೆಯರಿಗೆ ಕರೆಕೊಟ್ಟರು.
ಅವರು ಮೂಡುಬೆಳ್ಳೆಯಲ್ಲಿ ಸೆ 25ರಂದು ನಡೆದ ದಲಿತ ಮಹಿಳಾ ಒಕ್ಕೂಟದ ಗ್ರಾಮ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ನಮ್ಮ ಮಕ್ಕಳಿಗೆ ಇಂದು ಧರ್ಮದ ಒಳಗಿರುವ ಜಾತೀಯತೆಯ ವಿಷ ನಂಜಿನ ಅರಿವಿಲ್ಲಾ, ನಮ್ಮ ಈ ಸ್ಥಿತಿಗೆ ಜಾತೀಯತೆಯೇ ಕಾರಣ ಎಂಬ ವಾಸ್ತವ ಸತ್ಯವನ್ನು ನಾವು ಅವರಿಗೆ ತಿಳಿಸಬೇಕಾಗಿದೆ.
ಈ ಹಿಂದೂ ಧರ್ಮದಲ್ಲಿ ನಮಗೆ ಸ್ಥಾನವೇ ಇಲ್ಲ ಎಂಬ ಕಟು ಸತ್ಯವನ್ನು ನೀವು ತಾಯಂದಿರು ನಮ್ಮ ಮಕ್ಕಳಿಗೆ ತಿಳಿಹೇಳಬೇಕು ಎಂದರು. ಈ ದೇಶದಲ್ಲಿ ಪ್ರತೀ ನಿಮಿಷಕ್ಕೆ ಒಂದರಂತೆ ಮೇಲ್ವರ್ಗದವರಿಂದ ದಲಿತರ ಮೇಲೇ ದೌರ್ಜನ್ಯ ನಡೆದರೂ ನಮ್ಮನ್ನು ಆಳುವ ಸರಕಾರವರು ಧರ್ಮ, ಪಾಕಿಸ್ತಾನ, ಮೂರ್ತಿ, ದೇವಸ್ಥಾನ, ದೇಶಭಕ್ತಿ, ಚೀತಾ ಹೀಗೆ ನಾನಾ ರೀತಿಯ ಸುಳ್ಳನ್ನು ನಮ್ಮ ತಲೆಗೆ ತುಂಬಿ ನಮ್ಮ ಅಭಿವೃದ್ಧಿಯನ್ನೇ ಮರೆಯುವಂತೆ ಮಾಡಿದ್ದಾರೆ. ಎಲ್ಲಾ ಸರಕಾರೀ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡೀ ಮೀಸಲಾತಿಯಿಂದ ಪರಿಶಿಷ್ಟರನ್ನು ವಂಚಿಸಲಾಗುತ್ತಿದೇ ಎಂದರು.
ಮೂಡುಬೆಳ್ಳೆ ಮಹಿಳಾ ಒಕ್ಕೂಟ ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ ಮಾಸ್ತರ್ ಮಾತನಾಡಿ ನಾವೆಲ್ಲಾ ಒಗ್ಗಟ್ಟಾಗಿ ಕೋಮುವಾದಿಗಳನ್ನು ಜಾತಿವಾದಿಗಳನ್ನು ಅಧಿಕಾರದಿಂದ ಕೆಳಗಿಳಿಸುವ ಕೆಲಸ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ದ.ಸಂ.ಸ.ಜಿಲ್ಲಾ ಸಂಘಟನಾ ಸಂಚಾಲಕರಾದ ಪರಮೇಶ್ವರ ಉಪ್ಪೂರು, ಭಾಸ್ಕರ್ ಮಾಸ್ತರ್, ಅಣ್ಣಪ್ಪ ನಕ್ರೆ , ವಿಧ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕರಾದ ರಾಜೇಂದ್ರ ಬೆಳ್ಳೆ, ಉಡುಪಿ ತಾಲೂಕು ಸಂಚಾಲಕರಾದ ಶಂಕರ್ ದಾಸ್ ಚೆಂಡ್ಕಳ, ಮೂಡುಬೆಳ್ಳೆ ಸಂಚಾಲಕರಾದ ರಾಘವ ಬೆಳ್ಳೆ ಉಪಸ್ಥಿತರಿದ್ದರು.
ಶಾಖೆ ಉದ್ಘಾಟನಾ ಸಮಾರಂಭಕ್ಕೂ ಮೊದಲು ಬೆಳ್ಳೆ ಚರ್ಚ್ ಸಮೀಪದಿಂದ ಮೆರವಣಿಗೆ ನಡೆಸಲಾಯಿತು.