ನಾವು ಯಾವುದೇ ಜನಪ್ರತಿನಿಧಿಗಳಿಗೆ 40% ಕಮೀಷನ್ ನೀಡಿಲ್ಲ- ಮುನಿಯಾಲು ಉದಯ್ ಕುಮಾರ್ ಶೆಟ್ಟಿ

ಉಡುಪಿ ಸೆ.26(ಉಡುಪಿ ಟೈಮ್ಸ್ ವರದಿ): ರಾಜ್ಯದಲ್ಲಿ ಇತ್ತೀಚಿಗೆ ಸುದ್ದಿ ಆಗುತ್ತಿರುವ 40 ಪರ್ಸೆಂಟ್ ಕಮಿಷನ್ ಗೂ ಉಡುಪಿ ಜಿಲ್ಲೆಯ ಗುತ್ತಿಗೆದಾರರಿಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಗುತ್ತಿಗೆದಾರರಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರು ತಿಳಿಸಿದ್ದಾರೆ.

ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಇತ್ತೀಚಿಗೆ ರಾಜ್ಯದಲ್ಲಿ ಸರಕಾರಿ ಕಾಮಗಾರಿಗಳಿಗೆ ಗುತ್ತಿಗೆದಾರರು ಸರಕಾರಕ್ಕೆ, ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ 40 ಶೇ. ಕಮಿಷನ್ ಹಣ ನೀಡುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಹಾಗೂ ವಿವಿಧ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಆದರೆ ಕಾಮಗಾರಿಗಾಗಿ ಈ ಹಿಂದಿನ ಸರಕಾರದ ಅವಧಿಯಲ್ಲಿ ಅಥವಾ ಈಗಿನ ಹಾಲಿ ಸರಕಾರದ ಅವಧಿಯಲ್ಲಿ ಕಮಿಷನ್ ನೀಡಿರುವ ಉದಾಹರಣೆ ಇರುವುದಿಲ್ಲ. ರಾಜ್ಯದಲ್ಲಿ ಇತ್ತೀಚಿಗೆ ಸುದ್ದಿ ಆಗುತ್ತಿರುವ 40% ಕಮಿಷನ್ ಗೂ ಉಡುಪಿ ಜಿಲ್ಲೆಯ ಗುತ್ತಿಗೆದಾರರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವ ನಮಗೆ ಈ ರೀತಿಯಾದಂತಹ ವಾತಾವರಣ ಕಂಡು ಬಂದಿರುವುದಿಲ್ಲ. ನಾವು ಪಿಡಬ್ಲ್ಯೂಡಿ ಜಿಲ್ಲಾ ಪಂಚಾಯತ್, ಸಣ್ಣ ನೀರಾವರಿ ಇಲಾಖೆ, ನಗರಾಭಿವೃದ್ಧಿ, ಬಂದರು ಇತ್ಯಾದಿ ಸರಕಾರಿ ಕಾಮಗಾರಿಗಳನ್ನು ಮಾಡುತ್ತಿದ್ದೇವೆ. ಈ ಕಾಮಗಾರಿಗಳನ್ನು ಟೆಂಡರ್ ಮುಖಾಂತರ ಪಡೆದು ಪಾರದರ್ಶಕವಾಗಿ ಗುಣಮಟ್ಟದ ಕಾಮಗಾರಿಗಳನ್ನು ನಡೆಸಿರುತ್ತೇವೆ. ಆದರೆ ನಾವು ಜಿಲ್ಲೆಯ ಯಾವುದೇ ಜನಪ್ರತಿನಿಧಿಗಳಿಗೆ ಕಮಿಷನ್ ಹಣವನ್ನು ನೀಡಿರುವುದಿಲ್ಲ ಎಂದು ಹೇಳಿದ್ದಾರೆ.

ಬೇರೆ ಕಡೆ ಆಗುತ್ತಿರುವ ಸಮಸ್ಯೆ ಬಗ್ಗೆ ನಾವು ಮಾತನಾಡುವುದಿಲ್ಲ ಆದರೆ ನಮ್ಮ ಜಿಲ್ಲೆಯಲ್ಲಿ 40 ಶೇ. ಕಮಿಷನ್ ನ ಸಮಸ್ಯೆ ಇಲ್ಲ. ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರು ಒಂದೇ ನಾಣ್ಯದ ಎರಡು ಮುಖಗಳಂತೆ ಒಟ್ಟಿಗೆ ಕೆಲಸ ಮಾಡಿದರೆ ಜಿಲ್ಲೆ ಅಭಿವೃದ್ಧಿಯಾಗುತ್ತದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ಹೊರತಾಗಿಯೂ ಕೆಲವು ಸಣ್ಣ ಗುತ್ತಿಗೆದಾರರಿಗೆ ಹಣ ಪಾವತಿ ಆಗದೆ ಸಮಸ್ಯೆಗಳಾಗುತ್ತಿದೆ. ಆದ್ದರಿಂದ ಗುತ್ತಿಗೆದಾರರಿಗೆ ಬಾಕಿ ಇರುವ ಹಣವನ್ನು ಶೀಘ್ರವಾಗಿ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆ ಅಭಿವೃದ್ಧಿ ಆಗಬೇಕು ಅದಕ್ಕೆ ಬೇಕಾದ ವ್ಯವಸ್ಥೆ ಆಗಬೇಕು. ರಸ್ತೆ, ನೀರಾವರಿ, ಸೇತುವೆಗಳ ಅಭಿವೃದ್ಧಿ ಆಗಬೇಕಾದರೆ ಅದಕ್ಕೆ ಅನುದಾನ ಬೇಕು ಹಾಗೂ ಬಂದ ಅನುದಾನಗಳು ಸಮರ್ಪಕವಾಗಿ ಬಳಕೆ ಆಗಬೇಕು. ಅದು ಬಿಟ್ಟು ತಿಕ್ಕಾಟ ನಡೆಯುತ್ತಿದ್ದರೆ ಅಭಿವೃದ್ಧಿ ಆಗವುದಿಲ್ಲ. ಜಿಲ್ಲೆಯಲ್ಲಿ ಸದ್ಯ ಮಳೆ ನಿಂತಿದ್ದು ರಸ್ತೆಗಳಲ್ಲೇ ಹದಗೆಟ್ಟಿದೆ. ಇದನ್ನು ಸರಿಪಡಿಸಬೇಕು. ಆದರೆ ಗುತ್ತಿಗೆದಾರರ ಆರೋಪಕ್ಕೆ ಸರಕಾರ ಸ್ಪಂದಿಸುತ್ತಿಲ್ಲ. ಇದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಇರುವ ಸಮಸ್ಯೆಗಳನ್ನು ಸರಿಪಡಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಜನಪ್ರನಿಧಿಗಳ ಜವಾಬ್ದಾರಿ ಎಂದರು. ಹಾಗೂ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಜಿಲೆಯಲ್ಲಿ ಗುತ್ತಿಗೆದಾರರಿಗೆ 100 ಕೋಟಿ ರೂ ಹಣ ಬರಲು ಬಾಕಿ ಇದೆ. ಆದರೆ ಇದು 40 ಶೇ,. ಕಮಿಷನ್ ವಿವಾದದಿಂದ ಬಾಕಿ ಇದೆ ಎಂದು ಹೇಳಲು ಆಗುವಿದಿಲ್ಲ. ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಸರಕಾರದ ನಿಯಮಾವಳಿಯ ಪ್ರಕಾರವೇ ಕಾಮಗಾರಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿಯೂ ಗುಣಮಟ್ಟದ ಕಾಮಗಾರಿಯನ್ನು ಮುಂದುವರೆಸುತ್ತೇವೆ ಎಂದು ಭರವಸೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಗುತ್ತಿಗೆದಾರರಾದ ವಾದಿರಾಜ ಶೆಟ್ಟಿ, ಜಯರಾಮ್ ಸಾಲಿಯಾನ್ ಬೋಳ, ಜೀವನ್ ಶೆಟ್ಟಿ ಬ್ರಹ್ಮಾವರ ಇದ್ದರು.

1 thought on “ನಾವು ಯಾವುದೇ ಜನಪ್ರತಿನಿಧಿಗಳಿಗೆ 40% ಕಮೀಷನ್ ನೀಡಿಲ್ಲ- ಮುನಿಯಾಲು ಉದಯ್ ಕುಮಾರ್ ಶೆಟ್ಟಿ

  1. ಒಳ್ಳೆಯ ಕಾಮಗಾರಿಎಂದು ಹೇಳಲು ಒಂದು ಉಧಾಹರಣೆ ಕೊಡಿ, ಉಡುಪಿ ಮಂಗಳೂರು ಹೆದ್ದಾರಿ ಉಧಾಹರಣೆಗೆ ಸಾಕು, ಒಳಗಿನ ಕಾಮಗಾರಿ ಹೇಳುವುದೇ ಬೇಡ
    ನಾಗರಿಕ

Leave a Reply

Your email address will not be published. Required fields are marked *

error: Content is protected !!