ಕಿಸಾನ್ ಕಾರ್ಡ್ ಹೊಂದಿದ ಮೀನುಗಾರರಿಗೆ ಸಾಲ ಸೌಲಭ್ಯ- ಸಚಿವ ಕೋಟ
ಮಂಗಳೂರು: ರಾಜ್ಯ ಸರ್ಕಾರ ಆತ್ಮ ನಿರ್ಮಲ ಯೋಜನೆ ಅಡಿಯಲ್ಲಿ ಮೀನುಗಾರಿಕೆ ಇಲಾಖೆಯ ಮೂಲಕ ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳಲು ಯೋಜನೆಯನ್ನು ರೂಪಿಸಿದೆ. ಈ ಯೋಜನೆಯ ಮೂಲಕ ತರಬೇತಿ ಪಡೆದುಕೊಂಡು ಪಂಜರ ಮೀನುಕೃಷಿಯಲ್ಲಿ ಯಶಸ್ಸು ಕಾಣಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಜಿಲ್ಲಾ ಪಂಚಾಯತ್‍ನಲ್ಲಿ ನಡೆದ ಪಂಜರ ಮೀನುಕೃಷಿ ಕಾರ್ಯಾಗಾರವನ್ನು ಉದ್ಘಾಟಿಸಿ ಇಲಾಖಾ ಮಾಹಿತಿಗಳ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ಸಚಿವರು, ಪಂಜರ ಮೀನು ಕೃಷಿಯು ಈ ಹಿಂದೆ ಗುಜರಾತ್, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯದಲ್ಲಿ ಮಾತ್ರ ಕಾಣಲು ಸಾಧ್ಯವಾಗಿತ್ತು. ಕರ್ನಾಟಕದಲ್ಲಿ ಈ ಯೋಜನೆ ಜಾರಿಗೊಳಿಸುವುದರ ಮೂಲಕ ಮೀನುಗಾರಿಕೆಯಲ್ಲಿ ಮಹತ್ವದ ಬದಲಾವಣೆಯನ್ನು ಪಡೆಯಬಹುದು ಎಂದರು.
ಕೇಂದ್ರ ಸರ್ಕಾರವು ಮೀನುಗಾರರನ್ನು ಪ್ರೋತ್ಸಾಹಿಸಲು ಡಿಸಿಸಿ ಬ್ಯಾಂಕ್ ವತಿಯಿಂದ ಕಿಸಾನ್ ಕಾರ್ಡ್ ಹೊಂದಿದವರಿಗೆ ರೂ. 2 ರಿಂದ 3 ಲಕ್ಷ ಸಾಲವನ್ನು ನೀಡುತ್ತಿದೆ. ಈ ಯೋಜನೆಯ ಮೂಲಕ 10 ಸಾವಿರ ಜನರಿಗೆ ಸ್ವಯಂ ಉದ್ಯೋಗ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದ್ದು, ಮೀನುಗಾರಿಕೆ ಇಲಾಖೆಯವರು ಒಟ್ಟುಗೂಡಿ ಒಂದು ತಂಡವಾಗಿ ಶ್ರಮಿಸಿದರೆ ಈ ಯೋಜನೆಯನ್ನು ತಳಮಟ್ಟದ ಜನರಿಗೆ ತಲುಪುವಂತೆ ಮಾಡಿ ಯೋಜನೆ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.