ಗುತ್ತಿಗೆದಾರ ಸಂತೋಷ ಪಾಟೀಲ ಲಿಂಗಾಯತರಲ್ಲವೇ?: ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ | Prajavani
ಬೆಂಗಳೂರು: ‘ಶೇ 40ರ ಲಂಚಕ್ಕಾಗಿ ಕಿರುಕುಳ ನೀಡಿ, ಬಿಜೆಪಿ ಸರ್ಕಾರದಿಂದ ಕೊಲೆಯಾದ ಗುತ್ತಿಗೆದಾರ ಸಂತೋಷ್ ಪಾಟೀಲ್ ಲಿಂಗಾಯತರಲ್ಲವೇ’ ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷವು ಪ್ರಶ್ನಿಸಿದೆ.
ಬಿಜೆಪಿ ನಾಯಕರು ‘ಲಿಂಗಾಯತ’ ಚರ್ಚೆಯನ್ನು ಮುನ್ನೆಲೆಗೆ ತಂದ ಬೆನ್ನಲ್ಲೇ ಟ್ವೀಟ್ ಮಾಡಿರುವ ಕಾಂಗ್ರೆಸ್, ಜಾತಿ ಶೀಲ್ಡ್ ಹಿಡಿದು ಕಮಿಷನ್ ಭ್ರಷ್ಟಾಚಾರವನ್ನು ರಕ್ಷಿಸಲು ಬಿಜೆಪಿ ವಿಫಲ ಯತ್ನ ನಡೆಸುತ್ತಿದೆ ಎಂದು ಹಂಗಿಸಿದೆ.
‘ಲಿಂಗಾಯತನೊಬ್ಬನ ಜೀವ ತೆಗೆದ ಬಿಜೆಪಿ ಸರ್ಕಾರ ಲಿಂಗಾಯತ ವಿರೋಧಿಯಲ್ಲವೇ? ಲಂಚ ಕಿರುಕುಳದ ಸಂತ್ರಸ್ತರಲ್ಲಿ ಲಿಂಗಾಯತ ಗುತ್ತಿಗೆದಾರರು ಇಲ್ಲವೇ?ಬಿಜೆಪಿ ಲಿಂಗಾಯತ ವಿರೋಧಿ ಮಾತ್ರವಲ್ಲ, ಇಡೀ ಮನುಕುಲದ ವಿರೋಧಿ’ ಎಂದೂ ಟೀಕಿಸಿದೆ.
‘ಮಠಗಳ ಅನುದಾನ ಪಡೆಯಲು ಶೇ 30ರ ಲಂಚ ಕೊಡಬೇಕು ಎಂದು ಎಂದು ಲಿಂಗಾಯತ ಸಮುದಾಯದ ಸ್ವಾಮೀಜಿಗಳು ಆರೋಪಿಸಿದ್ದರು. ಇದು ಲಿಂಗಾಯತರಿಗೆ ಮಾಡಿದ ಅವಮಾನವಲ್ಲವೇ? ಶೇ 40ರ ಸರ್ಕಾರದ್ದು ಜಾತ್ಯಾತೀತ ಭ್ರಷ್ಟಾಚಾರ. ಇದರಲ್ಲಿ ಲಿಂಗಾಯತರೂ ಸಂತ್ರಸ್ತರೇ’ ಎಂದು ಕಾಂಗ್ರೆಸ್ ಹೇಳಿದೆ.