ತೀರ್ಥ ಕ್ಷೇತ್ರಕ್ಕೆ ಪುರುಷರು ಅಂಗಿ, ಬನಿಯನ್ ತೆಗೆದು ಹೋಗಬೇಕು ಪದ್ಧತಿ ರದ್ದು ಮಾಡುವಂತೆ ಸರಕಾರಕ್ಕೆ ಪತ್ರ

ಮಂಗಳೂರು ಸೆ.24: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ತೀರ್ಥ ಕ್ಷೇತ್ರವಾದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪುರುಷ ಭಕ್ತರು ಅಂಗಿ,ಬನಿಯನ್ ತೆಗೆದು ದೇವಸ್ಥಾನದ ಒಳಗೆ ಹೋಗಬೇಕು ಎಂಬ ಪದ್ಧತಿಯನ್ನು ರದ್ದು ಮಾಡುವಂತೆ ಮಂಗಳೂರು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು ಸರಕಾರಕ್ಕೆ ಪತ್ರ ಬರೆದಿದೆ.

ಈ ಬಗ್ಗೆ ಮಂಗಳೂರು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು ಧಾರ್ಮಿಕ ದತ್ತಿ ಇಲಾಖೆಗೆ ಬರೆದಿರುವ ಪತ್ರದಲ್ಲಿ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ ಹಾಗೂ ಇನ್ನಿತರ ದೇವಸ್ಥಾನಗಳಲ್ಲಿ ಶರ್ಟು, ಬನಿಯನ್ ಕಳಚಿ ದೇವರ ದರ್ಶನ ಪಡೆಯುವಂಥ ಪದ್ಧತಿ ಇರುವುದು ಸರಿಯಲ್ಲ. ಈ ಕುರಿತಂತೆ ಇರುವ ನಿಯಗಮಳನ್ನು ತೆಗೆದುಹಾಕಬೇಕು. ಭಕ್ತಾದಿಗಳಿಗೆ ಅಂಗಿ-ಬನಿಯನ್ ಕಳಚುವಂತೆ ದೇಗುಲಗಳಲ್ಲಿ ಅಳವಡಿಸಲಾಗಿರುವ ಬೋರ್ಡ್ ಗಳನ್ನು ತೆರವುಗೊಳಿಸಬೇಕು. ಇಂಥ ನಿಯಮಗಳಿಂದ ಕೆಲವು ಭಕ್ತಾದಿಗಳಿಗೆ ಮಾನಸಿಕ ಕಿರಿಕಿರಿಗಳು ಉಂಟಾಗುತ್ತವೆ. ಚರ್ಮರೋಗ ಇರುವವರು ಬಟ್ಟೆ ಕಳಚಿದರೆ ಅವರಲ್ಲಿನ ಕಾಯಿಲೆಯ ಸೋಂಕು ಇತರರಿಗೆ ಹರಡುವ ಸಾಧ್ಯತೆಯಿರುತ್ತದೆ.

ಇನ್ನು, ಅಂಗವಿಕಲರಿಗಂತೂ ಇದರಿಂದ ಸಾಕಷ್ಟು ತೊಂದರೆಯಾಗುತ್ತದೆ. ಹಾಗಾಗಿ, ಇದು ಸಂವಿಧಾನದ ಉಲ್ಲಂಘನೆಯೆನಿಸುತ್ತದೆ ಎಂದು ಹೇಳಿದೆ.ಹಿಂದೂ ಧರ್ಮದ ಯಾವುದೇ ಧರ್ಮ ಗ್ರಂಥಗಳಲ್ಲಿ ದೇವಸ್ಥಾನದೊಳಕ್ಕೆ ಅಂಗಿ- ಬನಿಯನ್ ಬಿಚ್ಚಿ ಹೋಗಬೇಕೆಂದು ಹೇಳಿಲ್ಲ. ಈ ಕುರಿತಂತೆ ಸರ್ಕಾರದಿಂದ ಯಾವುದೇ ನಿರ್ದೇಶನವಾಗಲೀ, ಸೂಚನೆಯಾಗಲೀ ಅಥವಾ ಆದೇಶವಾಗಲೀ ಬಂದಿರುವುದಿಲ್ಲ. ಆದರೂ, ಇದನ್ನು ಪಾಲಿಸಲಾಗುತ್ತಿದೆ. ಇದರಿಂದ ಭಕ್ತಾದಿಗಳಿಗೆ ಮುಜುಗರವಾಗುವಂಥ ಸಂದರ್ಭಗಳೂ ಇರುತ್ತದೆ. ಹಾಗಾಗಿ, ಈ ಕುರಿತಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.ಹಾಗೂ  ಕೆಲವು ದೇವಸ್ಥಾನಗಳಲ್ಲಿ ಇಂಥ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಲು ದೇವಸ್ಥಾನ ಕೆಲವು ಸಿಬ್ಬಂದಿಗಳನ್ನು ಬೆತ್ತ ಹಿಡಿದು ನಿಲ್ಲಿಸಿರುತ್ತಾರೆ. ಈ ನಿಯಮವನ್ನೂ ನಿಲ್ಲಿಸಬೇಕು, ಅಲ್ಲದೆ, ಈ ಮನವಿಗೆ 15 ದಿನದಲ್ಲಿ ಉತ್ತರ ಕೊಡಬೇಕು ಎಂದು ಕೋರಲಾಗಿದೆ ಎಂದು ತಿಳಿದು ಬಂದಿದೆ. 

2 thoughts on “ತೀರ್ಥ ಕ್ಷೇತ್ರಕ್ಕೆ ಪುರುಷರು ಅಂಗಿ, ಬನಿಯನ್ ತೆಗೆದು ಹೋಗಬೇಕು ಪದ್ಧತಿ ರದ್ದು ಮಾಡುವಂತೆ ಸರಕಾರಕ್ಕೆ ಪತ್ರ

  1. ಇಷ್ಟ ಇಲ್ಲದವರು ಬಾರದಿದ್ದರೆ ಆಯಿತು, ದೇವರ ಎದುರಲ್ಲಿ ಮುಜುಗರ ಆಗುವುದು ಯಾರಿಗೆ ಭಕ್ತಿ ಇರುವವರಿಗಂತೂ ಅಲ್ಲವೇ ಅಲ್ಲ… ಅನಗತ್ಯ ವಿಚಾರ ಮೊದಲು ಅರ್ಧಂಬರ್ಧ ಮಿಡಿ ಚಡ್ಡಿ ತೊಟ್ಟು ಬರ್ತಾರಲ್ಲ ಅದನ್ನು ನಿಷೇಧಿಸಿ

Leave a Reply

Your email address will not be published. Required fields are marked *

error: Content is protected !!