ಭಟ್ಕಳ: ಡಿವೈಡರ್’ಗೆ ಕಾರು ಡಿಕ್ಕಿ- ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಭಟ್ಕಳ, ಸೆ.24: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಚಲಾಯಿಸುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಿನ್ನೆ ತಡರಾತ್ರಿ ಭಟ್ಕಳ ಸಮೀಪದ ಮೂಡಭಟ್ಕಳ ಬೈಪಾಸ್ ರಾ.ಹೆ.66ರಲ್ಲಿ ನಡೆದಿದೆ.

ಅಂಜುಮನ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸಯನ್ಸ್ ಇಂಜಿನಿಯರಿಂಗ್ ನ ದ್ವಿತೀಯ ವರ್ಷದ ವಿದ್ಯಾರ್ಥಿ ರಂಗಿನಕಟ್ಟೆ ನಿವಾಸಿ ಮುಹಮ್ಮದ್ ಉನೈಸ್ ಖತೀಬ್ (20) ಮೃತಪಟ್ಟವರು.

ಅಪಘಾತದಲ್ಲಿ ಮುಹಮ್ಮದ್ ಫುರ್ಖಾನ್ ಗಂಗಾವಳಿ, ಮುಹಮ್ಮದ್ ಸುಹೈಲ್ ಗೋಲಿವಾಲೆ, ಸೈಯದ್ ಇಸ್ಮಾಯೀಲ್ ಲಂಕಾ ಮತ್ತು ಅಬ್ದುರ್ರಹ್ಮಾನ್ ಎಂಬ ನಾಲ್ವರು ಗಾಯಗೊಂಡಿದ್ದು, ಈ ಪೈಕಿ ಮುಹಮ್ಮದ್ ಫುರ್ಖಾನ್ ಗಂಗಾವಳಿ, ಮುಹಮ್ಮದ್ ಸುಹೈಲ್ ಗೋಲಿವಾಲೆ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಈ ಐವರು ವಿದ್ಯಾರ್ಥಿಗಳು ಗೆಳೆಯರಾಗಿದ್ದು, ಕಳೆದ ರಾತ್ರಿ ಪರೀಕ್ಷೆಯ ಸಿದ್ಧತೆ ಮುಗಿಸಿ ಟೀ ಕುಡಿಯಲೆಂದು ಕಾರಿನಲ್ಲಿ ಒಟ್ಟಿಗೆ ಹೊರಟಿದ್ದರು. ಶಿರೂರು ಚೆಕ್ ಪೋಸ್ಟ್ ಬಳಿಯ ಟಿ ಸ್ಟಾಲ್ ವೊಂದರಲ್ಲಿ ಚಹಾ ಕುಡಿದು ಭಟ್ಕಳದತ್ತ ವಾಪಸ್ ಆಗುತ್ತಿದ್ದ ವೇಳೆ ಮೂಡಭಟ್ಕಳ ಬೈಪಾಸ್ ರಾ.ಹೆ.66ರಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಎರಡು ಚಕ್ರಗಳು ಕಳಚಿಕೊಂಡಿವೆ. ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!