ಮೂರು ತಿಂಗಳ ಬಳಿಕ ಮತ್ತೆ ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯ ಬರೆ

ಬೆಂಗಳೂರು: ಜುಲೈ ತಿಂಗಳಿನಲ್ಲಷ್ಟೇ ವಿದ್ಯುತ್‌ ದರ ಏರಿಕೆಯ ಬಿಸಿ ತಾಗಿಸಿಕೊಂಡಿದ್ದ ರಾಜ್ಯದ ಜನ, ಅಕ್ಟೋಬರ್‌ 1ರಿಂದ ಅನ್ವಯವಾಗುವಂತೆ ಪ್ರತಿ ತಿಂಗಳು ವಿದ್ಯುತ್‌ ಬಳಕೆಗೆ ಹೆಚ್ಚಿನ ವೆಚ್ಚ ಮಾಡಬೇಕಾಗಿದೆ.

ಇಂಧನ ಹೊಂದಾಣಿಕೆ ಶುಲ್ಕವನ್ನು ಅಕ್ಟೋಬರ್‌ 1 ರಿಂದ 2023ರ ಮಾರ್ಚ್‌ 31ರವರೆಗೆ ಅನ್ವಯ ವಾಗುವಂತೆ (6 ತಿಂಗಳ ಅವಧಿಗೆ) ಪರಿಷ್ಕರಿಸಿ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಆದೇಶ ಹೊರಡಿಸಿದೆ. ಹೀಗಾಗಿ, ಪ್ರತಿ ಯೂನಿಟ್‌ಗೆ 24 ಪೈಸೆಯಿಂದ 43 ಪೈಸೆಯವರೆಗೆ ಹೆಚ್ಚಿಸಿ ಆದೇಶ ನೀಡಿದೆ.

ಮೆಸ್ಕಾಂ ಎಫ್‌ಎಸಿ ಶುಲ್ಕವು ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ಮತ್ತು ಹೆಸ್ಕಾಂ ಎಫ್‌ಎಸಿ ಶುಲ್ಕವು ಹುಕ್ಕೇರಿ ಆರ್‌ಇಸಿಎಸ್‌ ಮತ್ತು ಏಕಸ್‌ ವಿಶೇಷ ಆರ್ಥಿಕ ವಲಯಕ್ಕೂ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದೇ ವರ್ಷದ ಜುಲೈ ತಿಂಗಳಿನಲ್ಲಿ 31 ಪೈಸೆಯಷ್ಟು ಬೆಸ್ಕಾಂಗೆ ಅನ್ವಯಿಸುವಂತೆ ಹೆಚ್ಚಿಸಲಾಗಿತ್ತು. ಮೆಸ್ಕಾಂ ವ್ಯಾಪ್ತಿಯಲ್ಲಿ 21 ಪೈಸೆ, ಸೆಸ್ಕ್‌ 19 ಪೈಸೆ, ಹೆಸ್ಕಾಂ 27 ಮತ್ತು ಜೆಸ್ಕಾಂ ವ್ಯಾಪ್ತಿಯಲ್ಲಿ 26 ಪೈಸೆಗಳಷ್ಟು ಹೆಚ್ಚಿಸಲಾಗಿತ್ತು.

ಕೇಂದ್ರ ವಿದ್ಯುತ್ ಉತ್ಪಾದನಾ ಕೇಂದ್ರ (ಸಿಜಿಎಸ್‌), ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿಎಲ್‌) ಮತ್ತು ಉಡುಪಿಯ ಶಾಖೋತ್ಪನ್ನ ವಿದ್ಯುತ್‌ ಘಟಕದ (ಯುಪಿಸಿಎಲ್‌) ಮೂಲಕ ಎಲ್ಲ ಎಸ್ಕಾಂಗಳು ವಿದ್ಯುತ್‌ ಖರೀದಿಸುತ್ತಿವೆ. ಕಲ್ಲಿದ್ದಲು ದರ ಗಣನೀಯವಾಗಿ ಏರಿದ್ದರಿಂದ ಎಫ್ಎಸಿ ಹೆಚ್ಚಿಸಲಾಗಿದೆ. ಹೀಗಾಗಿ ವೆಚ್ಚವು ಯೂನಿಟ್‌ಗೆ 48ರಿಂದ 86 ಪೈಸೆಯಷ್ಟು ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2022ರ ಏಪ್ರಿಲ್‌ನಿಂದ ಜೂನ್‌ವರೆಗೆ ರೂ.643 ಕೋಟಿಯಷ್ಟು ವಿದ್ಯುತ್‌ ಖರೀದಿ ವೆಚ್ಚ ಹೆಚ್ಚಳವಾಗಿದ್ದು, 80 ಪೈಸೆ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕವನ್ನು ವಸೂಲಿ ಮಾಡಲು ಅವಕಾಶ ನೀಡುವಂತೆ ಕೋರಿ ಕೆಇಆರ್‌ಸಿಗೆ ಬೆಸ್ಕಾಂ ಅರ್ಜಿ ಸಲ್ಲಿಸಿತ್ತು.

ಇದೇ ರೀತಿ, 55 ಪೈಸೆಯಷ್ಟು ಹೆಚ್ಚು ಶುಲ್ಕ ಪಡೆಯಲು ಮೆಸ್ಕಾಂ, 70 ಪೈಸೆಯಷ್ಟು ಹೆಚ್ಚಿಸುವಂತೆ ಸೆಸ್ಕ್‌, 81 ಪೈಸೆ ಹೆಚ್ಚಿಸುವಂತೆ ಹೆಸ್ಕಾಂ ಮತ್ತು 58 ಪೈಸೆ ಹೆಚ್ಚಿಸುವಂತೆ ಜೆಸ್ಕಾಂ ಅರ್ಜಿ ಸಲ್ಲಿಸಿದ್ದವು. ಒಟ್ಟಾರೆಯಾಗಿ ರೂ.1244 ಕೋಟಿಗೂ ಹೆಚ್ಚು ಖರೀದಿ ವೆಚ್ಚದಲ್ಲಿ ಏರಿಕೆಯಾಗಿದೆ ಎಂದು ಎಸ್ಕಾಂಗಳು ಪ್ರಸ್ತಾವದಲ್ಲಿ ತಿಳಿಸಿದ್ದವು.

ಮೂರು ತಿಂಗಳಿಗೊಮ್ಮೆ ಇಂಧನ ಹೊಂದಾಣಿಕೆ ಶುಲ್ಕವನ್ನು ಪರಿಷ್ಕರಿಸಲಾಗುತ್ತದೆ. ಆದರೆ, ಗ್ರಾಹಕರಿಗೆ ಹೆಚ್ಚುವರಿ ಹೊರೆ ತಪ್ಪಿಸುವ ಉದ್ದೇಶದಿಂದ ಈಗ ಶುಲ್ಕವನ್ನು ಆರು ತಿಂಗಳಿಗೆ ಅನ್ವಯಿಸುವಂತೆ ಪರಿಷ್ಕರಿಸಲಾಗಿದೆ. 

ಇಂಧನ ವ್ಯತ್ಯಾಸ ದರಗಳಿಗೆ ಸಂಬಂಧಿಸಿದಂತೆ ‘ಇಂಧನ ವೆಚ್ಚ ಹೊಂದಾಣಿಕೆ ಶುಲ್ಕಗಳ ನಿಯಮಗಳು–2013’ರ ಅನ್ವಯ ಕೆಇಆರ್‌ಸಿಗೆ ಮೂರು ತಿಂಗಳಿಗೊಮ್ಮೆ ಎಲ್ಲ ಎಸ್ಕಾಂ
ಗಳು ಅರ್ಜಿ ಸಲ್ಲಿಸುತ್ತವೆ. ಅರ್ಜಿಯನ್ನು ಆಯೋಗವು ಪರಾಮರ್ಶಿಸಿ, ಇಂಧನ ವ್ಯತ್ಯಾಸ ದರವನ್ನು ವಸೂಲಿ ಮಾಡಲು ಅಥವಾ ಕಡಿತಗೊಳಿಸಲು ಆದೇಶಿಸುತ್ತದೆ. ಕಲ್ಲಿದ್ದಲು ಹಾಗೂ ತೈಲ ಬೆಲೆ ಹೆಚ್ಚಾದಾಗ ಹೊಂದಾಣಿಕೆ ವೆಚ್ಚ ಹೆಚ್ಚಾಗುತ್ತದೆ. ಕಡಿಮೆಯಾದಾಗ ವೆಚ್ಚ ಇಳಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!