ಸೈಬರ್ ಕ್ರೈಮ್‌ಗಳ ಬಗ್ಗೆ ಆರ್ಬಿಐಗೆ ಪ್ರತಿದಿನ 500 ಕ್ಕೂ ಅಧಿಕ ದೂರು-ಮೀನಾಕ್ಷಿ ಗಡ್
ಉಡುಪಿ, ಸೆ.23: ಬ್ಯಾಂಕುಗಳಿಗೆ ಸಂಬಂಧಿಸಿದ ಸೈಬರ್ ಕ್ರೈಮ್‌ಗಳ ಬಗ್ಗೆ ರಿಸರ್ವ್ ಬ್ಯಾಂಕಿಗೆ ಪ್ರತಿದಿನ 500ಕ್ಕೂ ಅಧಿಕ ದೂರುಗಳು ಬರುತ್ತಿರುತ್ತವೆ. ಆನ್‌ಲೈನ್ ವ್ಯವಹಾರ ನಡೆಸುವ ವೇಳೆ ಸೈಬರ್ ಭದ್ರತೆ ಕುರಿತಂತೆ ಪ್ರತಿಯೊಬ್ಬರು ತುಂಬಾ ಎಚ್ಚರಿಕೆ ವಹಿಸಬೇಕಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರಿನ ಪ್ರಧಾನ ವ್ಯವಸ್ಥಾಪಕರಾದ ಮೀನಾಕ್ಷಿ ಗಡ್ ಹೇಳಿದ್ದಾರೆ.
ಉಡುಪಿ ಕೋ-ಅಪರೇಟಿವ್ ಟೌನ್ ಬ್ಯಾಂಕ್‌ನಲಿ ಕರಾವಳಿ ಕರ್ನಾಟಕದ ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲೇ ಪ್ರಥಮವಾಗಿ ಜಾರಿಗೊಳ್ಳುತ್ತಿರುವ ಯುಪಿಐ ಪಾವತಿ ಸೌಲಭ್ಯವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಆನ್‌ಲೈನ್ ಬ್ಯಾಂಕಿಂಗ್‌ನಲ್ಲಿ ಈಗ ಸುರಕ್ಷತೆ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಪ್ರತಿದಿನ 500ಕ್ಕೂ ಅಧಿಕ ದೂರುಗಳು ಆರ್‌ಬಿಐಗೆ ಬರುತ್ತವೆ. ನೀವು ಪಾಸ್‌ವರ್ಡ್‌ನ್ನು ಯಾವುದೇ ಕಾರಣಕ್ಕೂ ಯಾರಿಗೂ ನೀಡಲೇಬಾರದು. ಗಂಡ ಹೆಂಡತಿಗೆ ತನ್ನ ಪಾಸ್‌ವರ್ಡ್ ಹೇಳಿ ಮೋಸ ಹೋದ ದೂರುಗಳೂ ಬಂದಿವೆ ಎಂದ ಮೀನಾಕ್ಷಿ, ಗೂಗಲ್ ಸರ್ಚ್ ವೇಳೆ ಬರುವ ಬ್ಯಾಂಕ್ ಶಾಖೆಗಳ ನಂ.ಹಾಗೂ ಕಸ್ಟಮರ್ ಕೇರ್ ನಂಬರ್ ಗಳನ್ನು ನಂಬಬೇಡಿ. ದೂರವಾಣಿ ಮೂಲಕ ಬರುವ ಯಾವುದೇ ಕರೆಗೆ ನಿಮ್ಮ ಬ್ಯಾಂಕ್ ಪಾಸ್‌ವರ್ಡ್ ಹಾಗೂ ಓಟಿಪಿ ಸಂಖ್ಯೆಯನ್ನು ತಿಳಿಸಬೇಡಿ ಎಂದರು.
ರಘುರಾಮ ರಾಜನ್ ಅವರು ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದಾಗ ರೂಪುಗೊಂಡ ‘ಯುಪಿಐ’ ಆ್ಯಪ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಆ್ಯಪ್ ಆಗಿ ಪರಿಗಣಿತವಾಗಿದೆ. ಇದರಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದರಿಂದ ಆನ್‌ಲೈನ್ ಮೂಲಕವೇ ಎಲ್ಲಾ ಬ್ಯಾಂಕಿಂಗ್ ವ್ಯವಹಾರ ನಡೆಸಬಹುದು. ಆದರೆ ಯುಪಿಐ ಬಂದ ತಕ್ಷಣ ಬ್ಯಾಂಕ್- ಗ್ರಾಹಕರ ನಡುವಿನ ಸಂಬಂಧ, ಸಂಪರ್ಕ ಕಳೆದುಹೋಗಬಾರದು. ದೇಶದಲ್ಲಿ ಯುಪಿಐ ಸೌಲಭ್ಯ ವಿರುವ 346ನೇ ಬ್ಯಾಂಕ್ ಇದಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಟೌನ್ ಬ್ಯಾಂಕಿನ ಅಧ್ಯಕ್ಷ, ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್‌ನ್ನು 110 ವರ್ಷಗಳ ಹಿಂದೆ 1912ರಲ್ಲಿ ಉಡುಪಿ ಇತಿಹಾಸದ ಚಿರಸ್ಮರಣೀಯ ವ್ಯಕ್ತಿ ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಮ್ ಸಾಹೇಬ್ ಬಹಾದ್ದೂರ್ (ಹಾಜಿ ಅಬ್ದುಲ್ಲಾ) ಸ್ಥಾಪಿಸಿದ್ದು, ಅವರೇ ಇದರ ಸ್ಥಾಪಕ ಅಧ್ಯಕ್ಷರಾಗಿದ್ದರು. 1981ರಲ್ಲಿ ಈ ಬ್ಯಾಂಕ್ ರಿಸರ್ವ್ ಬ್ಯಾಂಕಿನ ಹತೋಟಿಗೆ ಬಂದಿತು ಎಂದರು.
ಟೌನ್ ಬ್ಯಾಂಕ್ ಈಗ 19,168 ಸದಸ್ಯರನ್ನು ಹೊಂದಿದ್ದು, 9.35 ಕೋಟಿ ರೂ. ಪಾಲು ಬಂಡವಾಳ, 18.38 ಕೋಟಿ ರೂ.ಮೀಸಲು ನಿಧಿ, 258.06 ಕೋಟಿ ರೂ.ಠೇವಣಿ, 175.14 ಕೋಟಿ ರೂ.ಹೊರಸಾಲವನ್ನು ಹೊಂದಿದೆ. ಈ ವರ್ಷಾಂತ್ಯಕ್ಕೆ 214.54 ಲಕ್ಷ ರೂ. ಲಾಭವನ್ನು ಗಳಿಸಿದ್ದು, ಸದಸ್ಯರಿಗೆ ಶೇ.10ರಷ್ಟು ಡಿವಿಡೆಂಡ್ ನೀಡಿದೆ. 2021-22ರಲ್ಲಿ ಬ್ಯಾಂಕ್ ಒಟ್ಟು 2103.65 ಕೋಟಿ ರೂ.ವ್ಯವಹಾರ ನಡೆಸಿದ್ದು, ‘ಎ’ ಗ್ರೇಡ್ ಬ್ಯಾಂಕ್ ಆಗಿ ವರ್ಗೀಕರಣ ಗೊಂಡಿದೆ ಎಂದರು.
ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಲಕ್ಷ್ಮೀನಾರಾಯಣ ಜಿ.ಎನ್., ಉಡುಪಿಯ ಇಂಜಿನಿಯರ್ ಯು.ಕೆ. ರಾಘವೇಂದ್ರ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ವಿಷ್ಣುಮೂರ್ತಿ ಆಚಾರ್ಯ ವಂದಿಸಿದರೆ, ಚಂದ್ರಕಾಂತ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.