ಕುಂದಾಪುರ: ರುಬ್ಬುವ ಕಲ್ಲಿಗೆ ಬಿದ್ದು ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸಾವು
ಕುಂದಾಪುರ: ಕುಡಿದ ಅಮಲಿನಲ್ಲಿ ತೂರಾಡಿಕೊಂಡು ಹೋಗಿ ರುಬ್ಬುವ ಕಲ್ಲಿನ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಹಾಲಾಡಿಯ ಕಾಸಾಡಿ ಎಂಬಲ್ಲಿ ನಡೆದಿದೆ.
ಕಾಸಾಡಿ ಕಾರಿಮನೆ ನಿವಾಸಿ 47ವರ್ಷ ಪ್ರಾಯದ ಪಾರ್ವತಿ ಮೃತದುರ್ದೈವಿ. ಇವರು ಕೂಲಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಕುಡಿಯುವ ಸ್ವಭಾವವನ್ನು ಹೊಂದಿದ್ದರು. ಸೆ.18ರಂದು ಕೆಲಸ ಮುಗಿಸಿ ಮನೆಗೆ ಮದ್ಯಪಾನ ಮಾಡಿಕೊಂಡು ಬಂದಿದ್ದು, ಮನೆಗೂ ಪಾರ್ಸೆಲ್ ತೆಗೆದುಕೊಂಡು ಬಂದು ರಾತ್ರಿ ಕುಡಿದಿದ್ದರು. ಬಳಿಕ ಕುಡಿದ ಅಮಲಿನಲ್ಲಿ ತೂರಾಡಿಕೊಂಡು ಹೋಗಿ ರುಬ್ಬುವ ಕಲ್ಲಿನ ಮೇಲೆ ಬಿದ್ದು, ತಲೆಗೆ ತೀವ್ರವಾದ ಗಾಯವಾಗಿತ್ತು.
ಮನೆಯವರು ಗಾಯವಾದ ಜಾಗಕ್ಕೆ ಕಾಫಿ ಪುಡಿ ಹಾಕಿದ್ದು, ರಕ್ತ ಸುರಿಯುವುದು ನಿಂತಿದ್ದರಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಮನೆಯಲ್ಲಿಯೇ ಇರಿಸಿಕೊಂಡಿದ್ದರು. ಸೆ.19ರಂದು ಪಾರ್ವತಿ ಅವರು ಮಾತನಾಡದೇ ಇದ್ದಾಗ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ವೈದ್ಯರ ಸಲಹೆಯಂತೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಕೊಂಡೊಯ್ದಿದ್ದರು. ಅಲ್ಲಿ ಚಿಕಿತ್ಸೆಯಲ್ಲಿದ್ದ ಪಾರ್ವತಿ ಅವರು ಚಿಕಿತ್ಸೆ ಫಲಕಾರಿಯಾಗದೆ ಸೆ.22ರಂದು ಮಧ್ಯರಾತ್ರಿ ಮೃತಪಟ್ಟಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.