ಉಡುಪಿ: ಅನುಮತಿ ಇಲ್ಲದೆ ಪ್ರತಿಭಟನೆ- 11 ಪಿಎಫ್ಐ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು
ಉಡುಪಿ ಸೆ.23(ಉಡುಪಿ ಟೈಮ್ಸ್ ವರದಿ): ನಗರದ ಡಯಾನಾ ಸರ್ಕಲ್ ಬಳಿ ಪಿ.ಎಫ್.ಐ ಕಾರ್ಯಕರ್ತರು ಯಾವುದೇ ಪರವಾನಿಗೆ ಇಲ್ಲದೇ ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಸಾರ್ವಜನಿಕರಿಗೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯುಂಟು ಮಾಡಿದ ಆರೋಪಿದ ಮೇಲೆ 11 ಮಂದಿಯನ್ನು ವಶಕ್ಕೆ ಪಡೆದು ಅವರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಪ್ರತಿಭಟನೆ ನಿರತರಾಗಿದ್ದ ಸಾದೀಕ್ ಅಹಮ್ಮದ್(40), ಅಫ್ರೋಜ್‍ಕೆ (39), ಇಲಿಯಾಸ್ ಸಾಹೇಬ್ (46), ಇರ್ಷಾದ್(37), ಫಯಾಜ್ ಅಹಮ್ಮದ್(39), ಮಹಮ್ಮದ್ ಅಶ್ರಫ್(43), ಎ. ಹಾರೂನ್ ರಶೀದ್, ಮೊಹಮ್ಮದ್ ಜುರೈಜ್ (42), ಇಶಾಕ್ ಕಿದ್ವಾಯಿ (30), ಶೌಕತ್‍ಅಲಿ (31), ಮಹಮ್ಮದ್ ಝಹೀದ್(24) ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನಿನ್ನೆ ಸಂಜೆ ವೇಳೆ ಡಯಾನಾ ಸರ್ಕಲ್ ಬಳಿ ಗುಂಪು ಸೇರಿದ್ದ 25 ರಿಂದ 30 ಮಂದಿ ಪಿಎಫ್‍ಐ ಕಾರ್ಯಕರ್ತರು ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು, ಪಿ.ಎಫ್.ಐ ಮುಖಂಡರನ್ನು ಎನ್‍ಐಎ ವಶಕ್ಕೆ ಪಡೆದಿರುವ ಬಗ್ಗೆ ಧಿಕ್ಕಾರ ಕೂಗುತ್ತಾ ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರಿಗೆ ಮತ್ತು ಸಂಚರಿಸುವ ವಾಹನಗಳಿಗೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪ್ರತಿಭಟನಾ ನಿರತರನ್ನು ವಿಚಾರಿಸಿದ್ದು, ಈ ವೇಳೆ ಅವರುಗಳು ಯಾವುದೇ ಪೂರ್ವಾನುಮತಿ ಇಲ್ಲದೇ ಪ್ರತಿಭಟನೆ ನಡೆಸುತ್ತಿರುವುದು ಕಂಡು ಬಂದಿದೆ.
ಬಳಿಕ ಪೊಲೀಸರು ಕಾರ್ಯಕರ್ತರನ್ನು ಪ್ರತಿಭಟನೆ ನಡೆಸದಂತೆ ಹಾಗೂ ಸ್ಥಳದಿಂದ ತೆರಳುವಂತೆ ಸೂಚನೆ ನೀಡಿದ್ದರು, ಆದರೂ ಅವರುಗಳು ಸ್ಥಳದಿಂದ ಹೋಗಲು ಒಪ್ಪದಿದ್ದಾಗ ಕನಿಷ್ಟ ಬಲ ಪ್ರಯೋಗಿಸಿ ಸ್ಥಳದಿಂದ ಚದುರಿಸಲು ಪ್ರಯತ್ನಿಸಿದ್ದು, ಆದರೆ ಆಗಲೂ ಸಹ ಕಾರ್ಯಕರ್ತರು ಪ್ರತಿಭಟನೆಯಲ್ಲಿ ನಿರತರಾಗಿದ್ದುದರಿಂದ ಸಿಬ್ಬಂದಿಯವರ ಸಹಾಯದಿಂದ ಪ್ರತಿಭಟನೆ ನಿರತರ ಪೈಕಿ 11 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೂ ಅವರ ವಿರುದ್ಧ ಅಕ್ರಮಕೂಟ ಸೇರಿ ಯಾವುದೇ ಪೂರ್ವಾನುಮತಿ ಇಲ್ಲದೆ ಸಾರ್ವಜನಿಕ ರಸ್ತೆಯನ್ನು ತಡೆದು ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಹಾಗೂ ಸಾರ್ವಜನಿಕರಿಗೆ ಅಡ್ಡಿಯುಂಟು ಮಾಡಿ ತೊಂದರೆ ನೀಡಿದ ಆರೋಪ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.