ಆನೆಗಳ ಭ್ರೂಣಹತ್ಯೆ ಮಾಡಿ ಅವುಗಳ ಹಾವಳಿ ತಪ್ಪಿಸಿ- ಎಂ.ಪಿ.ಕುಮಾರಸ್ವಾಮಿ
ಬೆಂಗಳೂರು ಸೆ.23: ಕೃಷಿ ಭೂಮಿಗಳ ಮೇಲೆ ಆನೆಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆನೆಗಳ ಭ್ರೂಣಹತ್ಯೆ ಮಾಡುವ ಮೂಲಕ ಅವುಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಯ ಎಂ.ಪಿ. ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಆನೆ ಹಾವಳಿ ಕುರಿತು ವಿಧಾನಸಭೆಯಲ್ಲಿ ಗುರುವಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ನಾವು ಪರಿಹಾರ ಕೊಡ್ತೀವಿ, ನೀವು ಸಾಯಲು ಸಿದ್ಧರಾಗಿರಿ ಎಂಬಂತಿದೆ ಸರ್ಕಾರದ ನಿಲುವು. ಆನೆಗಳಿಂದ ಅತ್ತ ಜನರಿಗೂ ನೆಮ್ಮದಿ ಇಲ್ಲ, ನಮಗೂ (ಶಾಸಕರಿಗೆ) ನೆಮ್ಮದಿ ಇಲ್ಲ. ಆನೆಗಳ ಸಂಖ್ಯೆ ನಿಯಂತ್ರಿಸಲು ಭ್ರೂಣಹತ್ಯೆ ಜಾರಿಗೆ ತನ್ನಿ. ಉಪಟಳ ನೀಡುವ ಆನೆಗಳನ್ನು ನಮ್ಮ ಭಾಗದಿಂದ ಹಿಡಿದು ಸಾಗಿಸಿ’ ಎಂದರು.
ಈ ವೇಳೆ ಮುಖ್ಯಮಂತ್ರಿಯವರ ಪರವಾಗಿ ಉತ್ತರ ನೀಡಿದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರು, ‘ಆನೆಗಳ ಭ್ರೂಣಹತ್ಯೆ ಮಾಡುವ ಪ್ರಸ್ತಾವ ಇಲ್ಲ. ಆನೆಗಳ ಹಾವಳಿಯಿಂದ ಸಂಭವಿಸುವ ಮಾನವ ಜೀವಹಾನಿ ಮತ್ತು ಬೆಳೆ ಹಾನಿಗೆ ನೀಡುವ ಪರಿಹಾರವನ್ನು ದ್ವಿಗುಣಗೊಳಿಸುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ಹಾಗೂ ಮೂಡಿಗೆರೆ ಭಾಗದಲ್ಲಿ ಹಾವಳಿ ನೀಡುತ್ತಿರುವ ‘ಮೂಡಿಗೆರೆ ಬೈರ’ ಎಂಬ ಆನೆಯನ್ನು ಸ್ಥಳಾಂತರಿಸಲು ಕಾರ್ಯಾಚರಣೆ ಆರಂಭಿಸಲಾಗಿದೆ’ ಎಂದು ಹೇಳಿದರು.
ಇದೇ ವೇಳೆ ‘ಬೇರೆ ಕಡೆ ಪುಂಡಾಟ ನಡೆಸುವ ಆನೆಗಳನ್ನು ಹಿಡಿದು ತಂದು ಚಾಮರಾಜನಗರ ಜಿಲ್ಲೆಯಲ್ಲಿ ಬಿಡುತ್ತಾರೆ. ಅವು ನಮ್ಮ ಊರಿನೊಳಕ್ಕೇ ಇರುತ್ತವೆ. ಇನ್ನು ಮುಂದೆ ಹಾಗಾಗದಂತೆ ಕ್ರಮ ವಹಿಸಿ’ ಎಂದು ಕಾಂಗ್ರೆಸ್‍ನ ನರೇಂದ್ರ ಮತ್ತು ಎಚ್.ಪಿ. ಮಂಜುನಾಥ್ ಅವರು ಆಗ್ರಹಿಸಿದರು.