ಪೇಸಿಎಂ ಪೋಸ್ಟರ್ ಅಭಿಯಾನಕ್ಕೆ ವಿರುದ್ಧವಾಗಿ ಬಿಜೆಪಿಯಿಂದ ‘ಸ್ಕ್ಯಾಮ್ ರಾಮಯ್ಯ’ ಪುಸ್ತಕ ಬಿಡುಗಡೆ
ಬೆಂಗಳೂರು ಸೆ.22: ಕಾಂಗ್ರೆಸ್ ನ ಪೇ.ಸಿಎಂ ಪೋಸ್ಟರ್ ಅಭಿಯಾನಕ್ಕೆ ವಿರುದ್ಧವಾಗಿ ಬಿಜೆಪಿ ‘ಸ್ಕ್ಯಾಮ್ ರಾಮಯ್ಯ’ ಎಂಬ ಪುಸ್ತಕ ಬಿಡುಗಡೆ ಮಾಡಿ ತಿರುಗೇಟು ನೀಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಇಂದು ಸುದ್ದಿಗೋಷ್ಠಿ ನಡೆಸಿ ‘ಸ್ಕ್ಯಾಮ್ ರಾಮಯ್ಯ’ ಎಂಬ ವ್ಯಂಗ್ಯವಾದ ಚಿತ್ರಗಳುಳ್ಳ, ಹಲವು ಆರೋಪಗಳ ಪುಸ್ತಕವನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು ಜನರ ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಈಗ ‘ಸ್ಕ್ಯಾಮ್ ರಾಮಯ್ಯನ ಹಗರಣಗಳ ಪುರಾಣದ ಕುರಿತಾದ ‘ಸ್ಕ್ಯಾಮ್ ರಾಮಯ್ಯ’ ಪುಸ್ತಕವನ್ನು ಬಿಡುಗಡೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರದ ಅವಧಿಯ ಎಲ್ಲಾ ಕರ್ಮಕಾಂಡವನ್ನು ಹೊರ ಹಾಕುತ್ತೇವೆ ಎಂದು ಕಿಡಿ ಕಾರಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್, ಸಿದ್ದರಾಜು, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ರಾಜ್ಯ ಮುಖ್ಯ ವಕ್ತಾರ ಎಂ. ಜಿ. ಮಹೇಶ್ ಉಪಸ್ಥಿತರಿದ್ದರು.
ಇನ್ನು ಈ ಕುರಿತಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ”ಸಿದ್ದರಾಮಯ್ಯ ಅವಧಿಯ ಕಾಂಗ್ರೆಸ್ ಸರ್ಕಾರ # ಪೇ ಹೈ ಕಮಾಂಡ್ ಸರ್ಕಾರ ಎಂಬ ಖ್ಯಾತಿ ಪಡೆದಿತ್ತು. ಗೋವಿಂದ ರಾಜು ಡೈರಿಯಲ್ಲಿ ನಕಲಿ ಗಾಂಧಿ ಪರಿವಾರಕ್ಕೆ ಸಲ್ಲಿಸಲಾದ ಕಪ್ಪಕಾಣಿಕೆಯ ವಿವರ ದಾಖಲಾಗಿತ್ತು. ಕಾಂಗ್ರೆಸ್ಸಿಗರೇ, ನೀವು ಯಾವ ಮಾದರಿಯಲ್ಲಿ ಕಪ್ಪಕಾಣಿಕೆ ‘ಪೇ’ ಮಾಡಿರುವುದು?” ಎಂದು ಪ್ರಶ್ನಿಸಿದೆ.
”ನೆಹರೂ ಆದಿಯಾಗಿ ಇಂದಿರಾ, ರಾಜೀವ್, ಸೋನಿಯಾ, ರಾಹುಲ್ ಗಾಂಧಿಯವರೆಗಿನ ನಕಲಿ ಗಾಂಧಿಗಳು ಭ್ರಷ್ಟಾತಿ ಭ್ರಷ್ಟರಾಗಿದ್ದಾರೆ. ಹೀಗಿರುವಾಗ ಅವರ ಹಿಂಬಾಲಕರು ತಿಹಾರ್ ಜೈಲಿಗೆ ಹೋಗಿ ಬರುವುದರಲ್ಲಿ ಅಚ್ಚರಿಯಿಲ್ಲ. ಕಾಂಗ್ರೆಸ್ ಈಗ ಬೇಲ್ ಪಾರ್ಟಿಯಾಗಿದೆ, ಜಾಮೀನು ಕೈಯಲ್ಲಿ ಹಿಡಿದುಕೊಂಡೇ ಹೊರಗೆ ತಿರುಗಾಡುತ್ತಿದ್ದಾರೆ” ತಿರುಗೇಟು ನೀಡಿದೆ.
”ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಎಷ್ಟು ಆದ್ಯತೆ ನೀಡಿತ್ತು ಎಂದರೆ ದೇಶದ ಪ್ರಥಮ ಪ್ರಧಾನಿ ಅಧಿಕಾರಕ್ಕೇರಿದ ವರ್ಷದ ಒಳಗಾಗಿ ಸ್ವತಂತ್ರ ಭಾರತದ ಮೊದಲ ಹಗರಣ ನಡೆಸಿದ್ದರು.ಕಾಂಗ್ರೆಸ್ ‘ಕೈ’ ಇಟ್ಟಲ್ಲೆಲ್ಲ ಹಗರಣಗಳ ಸರಪಳಿಯೇ ನಡೆದಿದೆ. ಆ ಸರಪಳಿಯ ಒಂದೊಂದು ಕೊಂಡಿಯಲ್ಲೂ ಒಬ್ಬೊಬ್ಬ ಕಾಂಗ್ರೆಸ್ ನಾಯಕರು ಸಿಲುಕಿಕೊಂಡಿದ್ದಾರೆ.” ಬರೆದುಕೊಂಡಿದೆ.