ಮಂಗಳೂರು: ಪಿಎಫ್‍ಐ ನಾಲ್ವರು ಮುಖಂಡರು ಎನ್‍ಐಎ ವಶಕ್ಕೆ
ಸುರತ್ಕಲ್, ಸೆ.22 : ಮಂಗಳೂರು ನಗರ ಹಾಗೂ ಹೊರವಲಯದ ಹಲವೆಡೆ ಇಂದು ಮುಂಜಾನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮುಖಂಡರ ಮನೆಗಳ ಮೇಲೆ ದಾಳಿ ಮಾಡಿ ನಾಲ್ವರು ಪಿಎಫ್‍ಐ ಮುಖಂಡರನ್ನು ಎನ್‍ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇಂದು ಮುಂಜಾನೆ 3:30ರ ಸುಮಾರಿಗೆ ಏಕಕಾಲದಲ್ಲಿ ಮಂಗಳೂರು ತಾಲೂಕಿನ ಕಂಕನಾಡಿ, ಹಳೆಯಂಗಡಿ, ಜೋಕಟ್ಟೆ, ಕಾವೂರಿನಲ್ಲಿರುವ ಪಿಎಫ್‍ಐ ನಾಯಕರ ಮನೆಗಳು ಹಾಗೂ ನಗರದಲ್ಲಿರುವ ಎಸ್.ಡಿ.ಪಿ.ಐ. ಕಚೇರಿಗೆ ಎನ್‍ಐಎ ದಾಳಿ ನಡೆಸಿದೆ.
ಪಿಎಫ್.ಐ ಮುಖಂಡರಾದ ಕಾವೂರು ನಿವಾಸಿ ನವಾಝ್, ಬಜ್ಪೆ ಜೋಕಟ್ಟೆಯ ಎ.ಕೆ.ಅಶ್ರಫ್, ಹಳೆಯಂಗಡಿಯ ಮೊಯ್ದಿನ್ ಹಾಗೂ ಕಂಕನಾಡಿ ನಿವಾಸಿ ಅಶ್ರಫ್ ಎಂಬವರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, ನಾಲ್ವರನ್ನು ವಶಕ್ಕೆ ಪಡೆದುಕೊಂಡಿದೆ. ಅಲ್ಲದೆ ಕೆಲಸ ನಿಮಿತ್ತ ದಿಲ್ಲಿಗೆ ತೆರಳಿದ್ದ ಕಂಕನಾಡಿಯ ಅಶ್ರಫ್ ಎಂಬವರನ್ನು ಅಲ್ಲಿಯೇ ವಶಕ್ಕೆ ಪಡೆದುಕೊಂಡಿದೆ. ಇನ್ನು ಮೊಯ್ದಿನ್ ಅವರ ಮನೆಯ ಮೇಲೆ ದಾಳಿ ಮಾಡಿದ ತಂಡ, ಅದೇ ಸಮಯದಲ್ಲಿ ಅವರ ತಾಯಿಯ ಮನೆಗೂ ದಾಳಿ ಮಾಡಿ, ಎರಡೂ ಮನೆಯನ್ನು ಪರಿಶೀಲಿಸಿದೆ. ಹಾಗೂ ನಾಲ್ವರ ಮನೆಯಲ್ಲಿದ್ದ ಎಲ್ಲಾ ಸದಸ್ಯರ ಮೊಬೈಲ್ ಫೊನ್‍ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪಿಎಫ್ ಮುಖಂಡರ ಮನೆಯ ಜೊತೆಗೆ ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ನ ನೆಲ್ಲಿಕಾಯಿ ರಸ್ತೆ ಬಳಿ ಇರುವ ಎಸ್.ಡಿ.ಪಿ.ಐ., ಪಿ.ಎಫ್.ಐ. ಕಚೇರಿ ಮೇಲೂ ಎನ್.ಐ.ಎ ದಾಳಿ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಎಸ್.ಡಿ.ಪಿ.ಐ. ದ.ಕ. ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಅವರು, ಎನ್.ಐ.ಎ ಅಧಿಕಾರಿಗಳು ಯಾವುದೇ ಸೂಕ್ತ ಕಾರಣಗಳನ್ನು ನೀಡದೇ ವಿನಾಕಾರಣ ಎಸ್.ಡಿ.ಪಿ.ಐ. ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಅಧಿಕಾರಿಗಳನ್ನು ಈ ಕುರಿತು ಮಾಹಿತಿ ಕೇಳಿದರೆ, ಪಿಎಫ್.ಐ ಕಚೇರಿ ಎಂದು ಎಸ್.ಡಿ.ಪಿ.ಐ. ಕಚೇರಿಗೆ ದಾಳಿ ಮಾಡಿರುವುದಾಗಿ ಸಮಜಾಯಿಷಿ ನೀಡಿದ್ದಾರೆ ಎಂದರು.
ಹಾಗೂ ಎನ್.ಐ.ಎ ಅಧಿಕಾರಿಗಳು, ಎಸ್ಡಿಪಿಐ ಕಚೇರಿಗೆ ಅತಿಕ್ರಮ ಪ್ರವೇಶ ಮಾಡಿ, ದರ್ಪ ಪ್ರದರ್ಶಿಸಿದ ಜೊತೆಗೆ ಕಚೇರಿಗೆ ಹಾನಿ ಉಂಟು ಮಾಡಿದ್ದಾರೆ. ಈ ಕುರಿತು ಕಾನೂನು ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದರ ಜೊತೆಗೆ ಎಸ್.ಡಿ.ಪಿ.ಐ. ಕಚೇರಿ ಕಟ್ಟಡದ ಬಾಡಿಗೆ ಅಗ್ರಿಮೆಂಟ್ ದಾಖಲೆ, ಕಚೇರಿಯಲ್ಲಿ ಬಳಕೆ ಮಾಡುವ ಲ್ಯಾಪ್ ಟಾಪ್ ಹಾಗೂ ನಮ್ಮ ಪಕ್ಷಕ್ಕೆ ಸಂಬಂಧಿಸಿದ ಕೆಲವು ಫೋಟೋ ಗಳನ್ನು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ. ಆದರೆ ಯಾವುದೇ ದಾಖಲೆಗಳನ್ನು ಕೊಂಡೊಯ್ದಿಲ್ಲ ಎಂದು ಸ್ಪಷ್ಟಪಡಿಸಿದರು.