PAYCM ಪೋಸ್ಟರ್ ಪ್ರಕರಣ: ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ
ಬೆಂಗಳೂರು, ಸೆ.22 : ನಗರದಲ್ಲಿ ಎಲ್ಲೆಡೆ PAYCM ಪೋಸ್ಟರ್ ಅಂಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಹಲವು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
PAYCM ಪೋಸ್ಟರ್ ಹಚ್ಚಿದ ಬಗ್ಗೆ ವಿಚಾರಣೆ ಮಾಡಲು ಇಂದು ಮುಂಜಾನೆ ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮಾಜಿ ಅಧ್ಯಕ್ಷ ಬಿ.ಆರ್.ನಾಯ್ಡು ಅವರನ್ನು ವಶಕ್ಕೆ ಪಡೆದು ಹೈಗ್ರೌಂಡ್ಸ್ ಪೋಲಿಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಪ್ರಕರಣದಲ್ಲಿ ನಾನು ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ. ಆದರೆ, ನನ್ನನ್ನು ಉದ್ದೇಶಪೂರ್ವಕವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನು ಈ ವಿಚಾರವಾಗಿ ಕೆಪಿಸಿಸಿ ಸಾಮಾಜಿಕ ಜಾಲತಾಣದ ಗಗನ್ ಯಾದವ್ ಅವರನ್ನು ಕೆಆರ್ ಪುರದ ಅವರ ನಿವಾಸ ದೇವಸಂದ್ರದಿಂದ ಸದಾಶಿವ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
PAYCM ಪೋಸ್ಟರ್ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿದೆ ಎನ್ನಲಾಗಿದೆ. ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೋಸ್ಟರ್ ಅಂಟಿಸಿದ್ದು, ನಾಲ್ಕು ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ.
ರಾಜ್ಯ ಬಿಜೆಪಿ ಸರಕಾರ ಪ್ರತಿಯೊಂದು ಕೆಲಸಕ್ಕೆ ಶೇ.40 ಕಮಿಷನ್ ಪಡೆಯುತ್ತಿದೆ ಎಂದು ಆರೋಪಿಸಿ ನಿನ್ನೆ ಬೆಂಗಳೂರಿನ ಹಲವೆಡೆ PAYCM ಪೋಸ್ಟರ್ ಅಂಟಿಸಿದ್ದ ಪ್ರಕರಣ ನಡೆದಿದ್ದು, ಸಾರ್ವಜನಿಕ ಸ್ಥಳದಲ್ಲಿ ಗೋಡೆಗಳ ಮೇಲೆ PAYCM ಪೋಸ್ಟರ್ ಗಳು ಕಂಡು ಬಂದಿದ್ದವು.