ಶಿರ್ವ: ರಸ್ತೆ ದಾಟಲು ನಿಂತಿದ್ದವರಿಗೆ ಬೈಕ್ ಢಿಕ್ಕಿ- ತಂದೆ ಮೃತ್ಯು, ಮಗ ಗಂಭೀರ
ಶಿರ್ವ ಸೆ.22 : ರಸ್ತೆ ದಾಟಲು ನಿಂತಿದ್ದ ತಂದೆ ಮಗನಿಗೆ ಬೈಕ್ ಢಿಕ್ಕಿ ಹೊಡೆದು ತಂದೆ ಮೃತಪಟ್ಟು ಮಗ ಗಂಭೀರ ಗಾಯಗೊಂಡ ಘಟನೆ ಶಿರ್ವದ ಬಂಟಕಲ್ಲು ಪೇಟೆಯ ಆಶಾ ಕಾಂಪ್ಲೆಕ್ಸ್ ಬಳಿ ನಿನ್ನೆ ರಾತ್ರಿ ನಡೆದಿದೆ.
ಬಾಗಲಕೋಟೆ ಮೂಲದ ಶರಣಪ್ಪ ಬಾಲಪ್ಪ ಗಂಜಿಹಾಳ(40) ಮೃತಪಟ್ಟವರು. ಶ್ರವಣ ಕುಮಾರ(6) ಅಪಘಾತದಲ್ಲಿ ಗಾಯಗೊಂಡವರು.
ಶರಣಪ್ಪ ತನ್ನ ಪುತ್ರ ಶ್ರವಣಕುಮಾರನೊಂದಿಗೆ ಬುಧವಾರ ರಾತ್ರಿ 7 ಗಂಟೆ ಸುಮಾರಿಗೆ ದಿನಸಿ ತರಲು ಬಂಟಕಲ್ಲು ಪೇಟೆಯ ಆಶಾ ಕಾಂಪ್ಲೆಕ್ಸ್‌ನ ಎದುರುಗಡೆ ರಸ್ತೆ ಬದಿಯಲ್ಲಿ ನಿಂತಿದ್ದರು. ಈ ವೇಳೆ ಶಂಕರಪುರ ಕಡೆಯಿಂದ ವೇಗವಾಗಿ ಬಂದ ಬೈಕ್ ಸವಾರ ಇವರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಇಬ್ಬರನ್ನೂ ಸಾರ್ವಜನಿಕರು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತಲೆಗೆ ಗಂಭೀರ ಗಾಯಗೊಂಡ ಶರಣಪ್ಪ ಅವರು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ. ಶ್ರವಣ ಕುಮಾರ ಅವರು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದೆ.
ಡಿಕ್ಕಿ ಹೊಡೆದ ಬೈಕ್ ಸವಾರ ಬೈಕ್ ನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.