ದೇವಸ್ಥಾನ, ಮಠಗಳಿಗೆ ರೂ.400 ಕೋಟಿ ಹಂಚಿಕೆ- ಯಾವ ಸಮುದಾಯಕ್ಕೆ ಎಷ್ಟು ಅನುದಾನ ಇಲ್ಲಿದೆ ಮಾಹಿತಿ…
ಬೆಂಗಳೂರು: ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಪಾವತಿಸುವ ‘ರೈತ ವಿದ್ಯಾನಿಧಿ’ ಯೋಜನೆಗೆ ₹810 ಕೋಟಿ ನೀಡಿದ್ದರೆ, ದೇವಸ್ಥಾನ, ಟ್ರಸ್ಟ್ ಮತ್ತು ಮಠಗಳಿಗೆ ₹400 ಕೋಟಿಯನ್ನು ಹೆಚ್ಚುವರಿಯಾಗಿ ನೀಡುವ ₹14,762 ಕೋಟಿ ಮೊತ್ತದ ಪೂರಕ ಅಂದಾಜನ್ನು ವಿಧಾನಸಭೆಯಲ್ಲಿ ಸೆ.21ರಂದು ಮಂಡಿಸಲಾಯಿತು.
ಬಜೆಟ್‌ನಲ್ಲಿ ಹಂಚಿಕೆ ಮಾಡಲಾಗಿರುವ ಮೊತ್ತಕ್ಕಿಂತ ಹೆಚ್ಚಿನ ಅನುದಾನವನ್ನು ನೀಡಲು ಈ ಸಾಲಿನ ಮೊದಲ ಪೂರಕ ಅಂದಾಜನ್ನು ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬೊಮ್ಮಾಯಿ ಮಂಡಿಸಿದರು.
ರೈತ ವಿದ್ಯಾನಿಧಿ ಸಿಎಂ ಬೊಮ್ಮಾಯಿ ಅವರ ನೆಚ್ಚಿನ ಕಾರ್ಯಕ್ರಮವಾಗಿದ್ದು, ಇದಕ್ಕೆ ಗಣನೀಯ ಮೊತ್ತ ನಿಗದಿ ಮಾಡಿದ್ದಾರೆ. ಅಲ್ಲದೆ, ಟ್ಯಾಕ್ಸಿ ಚಾಲಕರ ಮಕ್ಕಳ ಉನ್ನತ ವಿದ್ಯಾಭ್ಯಾಸವನ್ನು ಉತ್ತೇಜಿಸಲು ವಿದ್ಯಾನಿಧಿ ಯೋಜನೆ ವಿಸ್ತರಿಸಲು ಮತ್ತು ಆರೋಗ್ಯ ಸೌಲಭ್ಯಕ್ಕಾಗಿ ವಿಶೇಷ ಯೋಜನೆ ರೂಪಿಸಲು ₹10 ಕೋಟಿ ಒದಗಿಸಲಾಗಿದೆ.
ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ಅಭಿವೃದ್ಧಿಗೆ ಹಾಗೂ ಹಾನಿಗೊಳಗಾದ ಮನೆಗಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಹೊರತು ಪಡಿಸಿ ಹೆಚ್ಚುವರಿ ಪಾಲಿನ ಅನುದಾನವೂ ಸೇರಿ ಒಟ್ಟು ₹837.37 ಕೋಟಿ ಸೇರಿಸಲಾಗಿದೆ.
ಲಿಂಗಾಯತಿಗೆ ₹100 ಕೋಟಿ, ಒಕ್ಕಲಿಗರಿಗೆ ₹105 ಕೋಟಿ
ಲಿಂಗಾಯಿತ ನಿಗಮಕ್ಕಿಂತ ಒಕ್ಕಲಿಗ ನಿಗಮಕ್ಕೇ ಹೆಚ್ಚು ಅನುದಾನ ನೀಡಲಾಗಿದೆ. ಒಕ್ಕಲಿಗ ನಿಗಮಕ್ಕೆ ₹105 ಕೋಟಿ ನೀಡಿದ್ದರೆ, ಲಿಂಗಾಯಿತ ನಿಗಮಕ್ಕೆ ₹100 ಕೋಟಿ ನೀಡಲಾಗಿದೆ.
ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ ₹50 ಕೋಟಿ, ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ₹7 ಕೋಟಿ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ₹100 ಕೋಟಿ, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ₹15 ಕೋಟಿ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ₹14 ಕೋಟಿ, ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ₹17 ಕೋಟಿ, ಮರಾಠ ಅಭಿವೃದ್ಧಿ ನಿಗಮಕ್ಕೆ ₹60 ಕೋಟಿ, ಮಡಿವಾಳ ಮಾಚಿದೇವ ನಿಗಮಕ್ಕೆ ₹9 ಕೋಟಿ, ಬಾಬು ಜಗಜೀವನರಾಮ್ ಅಭಿವೃದ್ಧಿ ನಿಗಮಕ್ಕೆ ₹25 ಕೋಟಿ ನೀಡಲಾಗಿದೆಂದು ಮಾಹಿತಿ ನೀಡಿದರು.