ಉಡುಪಿ: ಸುಳ್ಳು ದೂರು ನೀಡಿ ಅನಗತ್ಯ ಕಿರುಕುಳ- ಪತ್ನಿ ವಿರುದ್ಧ ಪತಿಯ ಆರೋಪ
ಉಡುಪಿ: ಪ್ರೀತಿಸಿ ಮದುವೆಯಾದ ಪತ್ನಿ, ಮಗಳು ಹಾಗೂ ಅಳಿಯನ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬರು, ತಾನು ನಿತ್ಯ ಅನುಭವಿಸುತ್ತಿದ್ದ ಹಿಂಸೆ, ಕಷ್ಟಗಳನ್ನು ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿಕೊಂಡರು.
ಕಣ್ಣೀರು ಸುರಿಸಿಕೊಂಡೇ ಸುದ್ದಿಗೋಷ್ಠಿ ನಡೆಸಿದ ಸಂತ್ರಸ್ತ, ಶಿರ್ವ ಗ್ರೀನ್ ಲೇಔಟ್‌ನ ನಿವಾಸಿ ಸನಾವುಲ್ಲ ಅವರು, ತನಗೆ ಹೆಂಡತಿ, ಮಗಳು ಹಾಗೂ ಅಳಿಯನಿಂದ ಆಗುತ್ತಿರುವ ಅನ್ಯಾಯವನ್ನು ತೋಡಿಕೊಂಡರು.
ಪತ್ನಿ ಅಮೀನಾ, ಮಗಳು ಮತ್ತು ಅಳಿಯ ನನ್ನ ವಿರುದ್ಧ ನಿರಂತರ ಸುಳ್ಳು ಕೇಸುಗಳನ್ನು ದಾಖಲಿಸಿ, ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಮೋಸ ಮಾಡಲು ಹಲವು ಕಾಗದ ಪತ್ರಗಳಿಗೆ ಸಹಿ ಮಾಡುವಂತೆ ಬೆದರಿಸಿದ್ದಾರೆ. ಸುಳ್ಳು ಕೇಸು ದಾಖಲಿಸಿ ಹೆದರಿಸಿ ಸಹಿ ಪಡೆದಿದ್ದಾರೆ. ನಂತರ ಮನೆಗೆ ಬಂದರೆ ಕೊಂದು ಮುಗಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ನಾನು ದುಡಿದು ಕಟ್ಟಿದ ಮನೆಯಲ್ಲಿ ನನ್ನ ಪತ್ನಿಗೆ ಹಕ್ಕು ಇರುವುದಿಲ್ಲ ಎಂದು ದೂರಿದರು.
ಮಗಳ ಮದುವೆಗೆ ಮನೆ ಅಡವಿಟ್ಟು ನೀಡಿದ ಹಣ ವಾಪಾಸ್ಸು ಕೇಳಿದಕ್ಕೆ ಎಲ್ಲ ಸೇರಿ ಹಲ್ಲೆ ನಡೆಸಿದ್ದಾಾರೆ. ಮನೆಯ ಸೊತ್ತುಗಳನ್ನು ಸಾಗಿಸುವುದನ್ನು ಪ್ರಶ್ನಿಸಿದಕ್ಕೆ ನನ್ನ ಹಾಗೂ ನನ್ನ ಕುಟುಂಬದವರ ವಿರುದ್ಧ ವಿನಾಕಾರಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮದುವೆಯಾಗಿ 30ವರ್ಷಗಳಾದ ಬಳಿಕ ವರದಕ್ಷಿಣೆ ಕಿರುಕುಳ ದೂರು ನೀಡಿ ಸತಾಯಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶೌಕತ್, ಅತ್ತೇರಿ, ಹಸೈನಾರ್ ಉಪಸ್ಥಿತರಿದ್ದರು.