ಉಡುಪಿ ಪ್ಲಾಟ್’ಗೆ ನುಗ್ಗಿ ದಾಂಧಲೆ ಎಬ್ಬಿಸಿದ ಯುವಕ
ಉಡುಪಿ: ಬುಧವಾರ ಬೆಳಗ್ಗಿನ ಜಾವ ಕರಾವಳಿ ಬೈಪಾಸ್ ಬಳಿಯ ವಸತಿ ಸಮುಚ್ಛಯಕ್ಕೆ ನುಗ್ಗಿದ ಯುವಕನೋರ್ವ ಅಲ್ಲಿನ ಗೇಟು, ಇಂಟರ್ ಲಾಕ್ ಗಳನ್ನು ಕಿತ್ತೆಸೆದು ಭಯದ ವಾತಾವರಣ ಸೃಷ್ಟಿಸಿ, ಸಾವಿರಾರು ರೂ.ನಷ್ಟವನ್ನುಂಟು ಮಾಡಿದ ಘಟನೆ ನಡೆದಿದೆ.
ದಾಂಧಲೆ ನಡೆಸಿದ ಹಾವೇರಿ ಮೂಲದ ಬಶೀರ್ (24) ಎಂಬಾತನನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ತಮ್ಮ ವಶಕ್ಕೆ ಪಡೆದು ದೊಡ್ಡಣಗುಡ್ಡೆಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಕರಣದ ವಿವರ: ಯುವಕ ಬೆಳಗ್ಗಿನ ಜಾವ 2 ಗಂಟೆಗೆಯ ಹೊತ್ತಿಗೆ ವಸತಿ ಸಮುಚ್ಛಯಕ್ಕೆ ನುಗ್ಗಿ ಜೋರಾಗಿ ಕೂಗಾಡುತ್ತಾ, ಮುಖ್ಯದ್ವಾರದ ಕ್ವಿಂಟಾಲ್ ಭಾರದ ಕಬ್ಬಿಣದ ಗೇಟನ್ನು ಲೀಲಾಜಾಲವಾಗಿ ಎತ್ತಿ ಎಸೆದಿದ್ದ ಅಲ್ಲದೆ ಅಂಗಳದ ಇಂಟರ್‌ಲಾಕ್, ಟೈಲ್ಸ್ ಪುಡಿಗಟ್ಟಿದ್ದಾನೆ. ಯುವಕನ ಬೊಬ್ಬೆ, ರೌದ್ರಾವತಾರಕ್ಕೆ ಬೆದರಿದ ಕಟ್ಟಡದ ನಿವಾಸಿಗಳು ಮನೆಯಿಂದ ಹೊರಗೆ ಬಾರದೆ ಮೂಕ ಪ್ರೇಕ್ಷಕರಾಗಿದ್ದರು. ಹೀಗಾಗಿ ಯುವಕನ ದಾಂಧಲೆ ನಿರಾತಂಕವಾಗಿ ಸಾಗಿತ್ತು.
ಕೊನೆಗೆ ವಸತಿ ಸಮುಚ್ಛಯದ ಮಂದಿ ಸಮಾಜ ಸೇವಕ ವಿಶು ಶೆಟ್ಟಿ ಅವರಿಗೆ ಮಾಹಿತಿ ನೀಡಿದಾಗ ಅವರು ಮುಂಜಾನೆ ಸ್ಥಳಕ್ಕೆ ಧಾವಿಸಿದರು. ಆ ಸಂದರ್ಭದಲ್ಲಿ ಯುವಕ ಅರೆ ನಗ್ನವಾಸ್ಥೆಯಲ್ಲಿಯೇ ರೌದ್ರರೂಪದಲ್ಲಿಯೇ ಕುಳಿತ್ತಿರುವುದು ಕಂಡು ಬಂತು. ವಿಶು ಶೆಟ್ಟಿ ಅವರು ಯುವಕನನ್ನು ಮಾತನಾಡಿಸಲು ಮುಂದಾದಾಗ ಆತ ಹಲ್ಲೆ ನಡೆಸಲು ಭಾರದ ಇಂಟರ್‌ಲಾಕ್ ಒಂದನ್ನು ಎತ್ತಿಕೊಂಡ ಆತಂಕಕಾರಿ ಸನ್ನಿವೇಶ ನಡೆಯಿತು. ಕೊನೆಗೂ ವಿಶು ಶೆಟ್ಟಿ ಅವರು ಆತನನ್ನು ಶಾಂತಗೊಳಿಸಿ, ಅವನ ಪೂರ್ವಾಪರವನ್ನು ತಿಳಿಯುವ ಪ್ರಯತ್ನ ಮಾಡಿದರಾದರೂ, ಯುವಕ ತನ್ನ ಹೆಸರನ್ನು ಬಿಟ್ಟರೆ ಮತ್ತಿತರ ವಿವರಗಳನ್ನು ತಿಳಿಸಿಲ್ಲ. ಅರೆ ನಗ್ನಾವಸ್ಥೆಯಲ್ಲಿದ್ದ ಯುವಕ ತನ್ನ ಬಟ್ಟೆಗಳನ್ನು ಧರಿಸಲು ಒಪ್ಪಲಿಲ್ಲ. ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ವಿಶು ಶೆಟ್ಟಿ ಅವರು ತಮ್ಮ ಜೀಪ್ ಹತ್ತಿಸಬೇಕಾದರೆ ಮತ್ತೆ ಯುವಕ ಕೆರಳಿದ. ಕೊನೆಗೆ ವಿಶು ಶೆಟ್ಟಿ ಅವರು ಹರಸಾಹಸ ಪಟ್ಟು ಜೀಪು ಹತ್ತಿಸಬೇಕಾಯಿತು.
ಯುವಕ ಮಾನಸಿಕ ಅಸ್ವಸ್ಥತೆಗೆ ಗುರಿಯಾದಂತೆ ಕಂಡು ಬಂದಿದ್ದು, ಈತ ಹಾವೇರಿಯಿಂದ ಉಡುಪಿಗೆ ಯಾರ ಜೊತೆಗೆ, ಹೇಗೆ ಬಂದ ಎಂಬ ಬಗ್ಗೆ ಮಾಹಿತಿ ಲಭಿಸಿಲ್ಲ. ಪ್ರಕರಣದ ಬಗ್ಗೆ ನಗರ ಠಾಣೆಗೆ ಮಾಹಿತಿ ನೀಡಲಾಗಿದೆ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ. ಯುವಕ ಸಂಬಂಧಿಕರು ಯಾರಾದರೂ ಇದ್ದರೆ ಬಾಳಿಗಾ ಆಸ್ಪತ್ರೆ ಅಥವಾ ನಗರ ಠಾಣೆಯನ್ನು ಸಂಪರ್ಕಿಸುವಂತೆ ಅವರು ಸೂಚಿಸಿದ್ದಾರೆ.
ಯುವಕ ವಸತಿ ಸಮುಚ್ಛಯಕ್ಕೆ ನುಗ್ಗಿ ಭಯದ ವಾತಾವರಣ ಸೃಷ್ಟಿಸಿದ್ದರೂ, ಅಲ್ಲಿ ಹೆಚ್ಚಿನ ಭದ್ರತೆ ಇದ್ದರಿಂದ ನಿವಾಸಿಗಳು ಅಪಾಯವಿಲ್ಲದೆ ಪಾರಾಗಿದ್ದಾರೆ. ಒಂದು ವೇಳೆ ಈತ ಜನ ಸಾಮಾನ್ಯರ ಮನೆಗೆ ನುಗ್ಗಿದ್ದರೆ ಭಾರಿ ಅನಾಹುತ ಸೃಷ್ಟಿಸುವ ಅಪಾಯವಿತ್ತು. ಇಂತಹ ಆತಂಕಕಾರಿ ಪ್ರಕರಣಗಳನ್ನು ಹ್ಯಾಂಡಲ್ ಮಾಡುವ ನಮ್ಮಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಈ ಬಗ್ಗೆ ಹಲವಾರು ಬಾರಿ ಜಿಲ್ಲಾಡಳಿತ, ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಪ್ರಮುಖವಾಗಿ ಮಾನಸಿಕ ಅಸ್ವಸ್ಥರಿಗೆ ಪುನರ್ವಸತಿ, ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲು ಪ್ರತ್ಯೇಕ ವಿಭಾಗವನ್ನು ಇನ್ನೂ ಕಲ್ಪಿಸಲಾಗಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಅನಿವಾರ್ಯತೆ ಬಂದೊದಗಿದೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ವೆಚ್ಚ ಭರಿಸುವುದು ಯಾರು? ನಾಳೆ ಈ ಯುವಕ ಗುಣಮುಖನಾದರೂ, ಆತನನ್ನು ಕುಟುಂಬ ಸ್ವೀಕರಿಸಲು ನಿರಾಕರಿಸಿದರೆ ಎಲ್ಲಿಗೆ ಸೇರಿಸೋದು ? ಸಮಾಜದ ನಿರ್ಲಕ್ಷ್ಯದಿಂದ ಮತ್ತೆ ಆತ ಬೀದಿಪಾಲಾಗುತ್ತಾನೆ. ಜಿಲ್ಲಾಡಳಿತ, ಜನಪ್ರತಿನಿಧಿಗಳು ಕಣ್ತೆರೆಯುವುದು ಯಾವಾಗ ?
ವಿಶು ಶೆಟ್ಟಿ ಅಂಬಲಪಾಡಿ, ಸಮಾಜ ಸೇವಕರು.