ದಲಿತ ಬಾಲಕ ದೇವರ ಮೂರ್ತಿ ಮುಟ್ಟಿದಕ್ಕೆ ದಂಡ- ಕ್ರಮಕ್ಕೆ ಪೇಜಾವರಶ್ರೀ ಆಗ್ರಹ

ಉಡುಪಿ ಸೆ.21(ಉಡುಪಿ ಟೈಮ್ಸ್ ವರದಿ): ಕೋಲಾರದ ಮಾಲೂರಿನಲ್ಲಿ ದಲಿತ ಬಾಲಕನಿಗೆ ದೇವರನ್ನು ಮುಟ್ಟಿದ ಎಂದು ದಂಡ ವಿಧಿಸಿ ಬಹಿಷ್ಕರಿಸಿರುವುದು ಖೇದಕರವಾಗಿದ್ದು ಈ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳು ಆಗ್ರಹಿಸಿದ್ದಾರೆ.

ಈ ಬಗ್ಗೆ ಇಂದು ಮಾತನಾಡಿದ ಅವರು, ಇಂತಹ ಘಟನೆಗಳನ್ನು ಯಾವುದೇ ಧರ್ಮ ಗ್ರಂಥಗಳು ಕೂಡಾ ಒಪ್ಪುವುದಿಲ್ಲ. ಉತ್ಸವ ಎನ್ನುವುದು ಎಲ್ಲರಿಗೂ ಸಂಬಂಧಿಸಿದ್ದು, ಇಂತಹ ಕಾರ್ಯ ನಡೆಯಿತು ಎಂದಾದರೆ ಶಿಕ್ಷಿಸಬೇಕು, ಬಹಿಷ್ಕಾರ ಹಾಕಬೇಕು ಎನ್ನುವುದನ್ನು ಯಾವ ಧರ್ಮಗ್ರಂಥಗಳೂ ಹೇಳುವುದಿಲ್ಲ. ಇಂತಹ ಘಟನೆಗಳು ನಡೆಯಲೇ ಬಾರದು. ಈಗಾಗಲೇ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಇತರ ಹಿಂದೂ ಪರ ಸಂಘಟನೆಗಳ ಮೂಲಕ ನಿರಂತರವಾದ ಪ್ರಯತ್ನ ನಡೆಯುತ್ತಲೇ ಇದೆ. ಇದರ ಜೊತೆಗೆ ಪ್ರಜೆಗಳಲ್ಲಿ ಈ ರೀತಿ ನಡೆದುಕೊಳ್ಳಬಾರದು, ಎಲ್ಲರೂ ಒಂದೇ ಎಂಬ ಬಗ್ಗೆ ಜಾಗೃತಿಯನ್ನು ಸರಕಾರ ಮೂಡಿಸಬೇಕು. ಹಾಗೂ ತಪ್ಪು ಮಾಡಿದವರನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗದಲ್ಲಿ ಉಗ್ರರರ ಪ್ರವೇಶ ಆಗಿದೆ ಎಂದು ತಿಳಿದು ಖೇದವಾಗಿದೆ. ಮಂಗಳೂರು ಮತ್ತು ಉಡುಪಿ ಪರಿಸರದಲ್ಲಿ ಇಂತಹ ಘಟನೆ ನಡೆದಿದ್ದು ಅನೇಕ ಬಾರಿ ಗಮನಕ್ಕೆ ಬಂದಿದೆ. ಸ್ಯಾಟಲೈಟ್ ಫೋನ್ ಕಾರ್ಯಚರಿಸುತ್ತಿದ್ದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಸರಕಾರಗಳು ಇದನ್ನು ಪರಿಶೀಲಿಸಬೇಕು ಜೊತೆಗೆ ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಈಗ ಕೇವಲ 1-2 ಪ್ರಕರಣ ಸಿಕ್ಕಿದೆ ಮುಂದೆ ಇಂತಹದ್ದು 12 ಆಗಬಾರದು. ಕೂಬಿಂಗ್ ಮಾದರಿಯಲ್ಲಿ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿಕೊಂಡರು.  

ಸಮಾಜದಲ್ಲಿ ಶಾಂತಿಯನ್ನು ಕದಡುವ ಪ್ರವೃತ್ತಿಗಳು ನಡೆಯುತ್ತಾ ಇರುತ್ತದೆ. ಸಮಾಜದಲ್ಲಿ ಅದು ಪ್ರಕಟವಾಗುವಾಗ ಕೋಮು ಸಂಘರ್ಷದ ಬಣ್ಣ ಬಳಿಯಲಾಗುತ್ತದೆ. ಇಂತಹ ಉಗ್ರರಿಂದ ಯಾರಿಗೂ ನೆಮ್ಮದಿ ಇಲ್ಲ. ಇದನ್ನು ಕಟ್ಟು ನಿಟ್ಟಿನ ಕ್ರಮಗಳಿಂದ ನಿರ್ಭಂಧಿಸಬೇಕು. ಸಮಾಜದಲ್ಲಿ ಅಶಾಂತಿಯನ್ನು ಹರಡುವಂತಹ ಯಾವುದೇ ಪ್ರಯತ್ನ ನಡೆದರೂ ಕೂಡಾ ಅದಕ್ಕೆ ಯಾವುದೇ ಕೋಮಿನ ಬಣ್ಣ ನೀಡದೆ ನಿಗ್ರಹಿಸಬೇಕು ಎಂದರು. ಹಾಗೂ ಭಾರತ ದೇಶದ ಒಳಗೆ ಇರುವವರು ಎಲ್ಲರೂ ಭಾರತೀಯರು. ಎಲ್ಲಿಯೂ ಉಗ್ರರ ಕರಿನೆರಳು ದೇಶದ ಮೇಲೆ ಹರಿಯ ಬಾರದು, ಸಾರ್ವಜನಿಕರು ಇಂತಹ ಕೃತ್ಯಗಳಿಗೆ ಬಲಿಯಾಗದ ಹಾಗೆ ಹಾಗೂ ಇನ್ನು ಮುಂದೆ ಇಂತಹ ಘಟನೆಗಳು ನಡೆಯದ ಹಾಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 

Leave a Reply

Your email address will not be published. Required fields are marked *

error: Content is protected !!