ನಾರಾಯಣ ಗುರುಗಳ ಸಂದೇಶ ಪಾಲಿಸಿದರೆ ನಮ್ಮನ್ನು ವಿಭಜಿಸಲು ಅಸಾಧ್ಯ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಕೇರಳ ಸೆ.21(ಉಡುಪಿ ಟೈಮ್ಸ್ ವರದಿ): ಬ್ರಹ್ಮಶ್ರೀ ನಾರಾಯಣ ಗುರುಗಳ `ಒಂದೇ ಜಾತಿ, ಒಂದೇ ಮತ, ಒಂದೇ ತತ್ವ’ ಎಂಬ ಸಂದೇಶವನ್ನು ಹಿಂದೂ ಸಮಾಜ ಅನುಸರಿಸಿದರೆ, ವಿಶ್ವದ ಯಾವುದೇ ಶಕ್ತಿಯು ಭಾರತವನ್ನು ವಿಭಜಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಂಜೆ ಅವರು ಹೇಳಿದ್ದಾರೆ.
ದಕ್ಷಿಣ ಭಾರತದ ಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಕೇರಳದ ವರ್ಕಲದಲ್ಲಿರುವ ಪ್ರಸಿದ್ಧ ಕ್ಷೇತ್ರ ಶಿವಗಿರಿ ಮಠಕ್ಕೆ ಭೇಟಿ ನೀಡಿದ ಅವರು, ಆ ಬಗ್ಗೆ ಮಾತನಾಡುತ್ತಾ., ಸಾಮಾಜಿಕ ಪರಿವರ್ತನೆಗಳ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿ ದಿನದಂದು ಕೇರಳದ ವರ್ಕಲದಲ್ಲಿರುವ ಪ್ರಸಿದ್ಧ ಕ್ಷೇತ್ರ ಶಿವಗಿರಿ ಮಠಕ್ಕೆ ಭೇಟಿ ನೀಡಿ, ಶ್ರೀಗುರುದೇವರ ಸಮಾಧಿಗೆ ನಮನ ಸಲ್ಲಿಸುವ ಸೌಭಾಗ್ಯ ಸಿಕ್ಕಿತು. ಸಮಾಜದ ಪರಿವರ್ತನೆಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟ ಬ್ರಹ್ಮಶ್ರೀ ನಾರಾಯಣ ಗುರುಗಳು ಬೋಧನೆಗಳ ಮೂಲಕ ಸಮಾಜಕ್ಕೆ ಉತ್ತಮ ಮಾರ್ಗದರ್ಶನವನ್ನು ನೀಡಿದವರು.
ದಕ್ಷಿಣ ಭಾರತದಾದ್ಯಂತ ಶ್ರೀ ಗುರುದೇವರ ತತ್ವ ಚಿಂತನೆಗಳು, ಬೋಧನೆಗಳು ಪಸರಿಸಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿಯೂ ಗುರುದೇವರ ಆದರ್ಶಗಳು ಹಿಂದೂ ಸಮಾಜದ ಒಗ್ಗಟ್ಟಿಗೆ ಅಡಿಪಾಯ. ಶ್ರೀ ನಾರಾಯಣ ಗುರುದೇವರ ಬೋಧನೆಗಳು, `ಒಂದೇ ಜಾತಿ, ಒಂದೇ ಮತ, ಒಂದೇ ತತ್ವ’ ಎಂಬ ಸಂದೇಶವನ್ನು ಹಿಂದೂ ಸಮಾಜ ಅನುಸರಿಸಿದರೆ, ವಿಶ್ವದ ಯಾವುದೇ ಶಕ್ತಿಯು ಭಾರತವನ್ನು ವಿಭಜಿಸಲು ಅಸಾಧ್ಯ ಎಂದರು.