ಆರ್ಥಿಕತೆಯನ್ನು ದೇವರ ಸಂದೇಶವಾಹಕಿಯಾಗಿ ಹೇಗೆ ವಿವರಿಸುವಿರಿ: ಪಿ.ಚಿದಂಬರಂ
ನವದೆಹಲಿ: ಕೊರೋನಾ ಲಾಕ್ಡೌನ್ ಮತ್ತು ದೇಶದ ಆರ್ಥಿಕತೆ ಕುಸಿಯುತ್ತಿರುವುದು ದೇವರ ಆಟ ಎಂದು ಹೇಳಿಕೆ ನೀಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ವ್ಯಂಗ ಮಾಡಿರುವ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ, ದೇವರ ಸಂದೇಶಕಾರರಾಗಿ ನಿರ್ಮಲಾ ಸೀತಾರಾಮನ್ ಅವರು ಕೊರೋನಾಕ್ಕಿಂತ ಮೊದಲು ಆರ್ಥಿಕತೆಯ ಅಸಮರ್ಪಕ ನಿರ್ವಹಣೆ ಹೇಗಾಯಿತು ಎಂದು ಹೇಳಬಹುದೇ ಎಂದು ಕೇಳಿದ್ದಾರೆ.
ಕೊರೋನಾ ಸಾಂಕ್ರಾಮಿಕ ದೇವರ ಆಟವಾದರೆ ಸತತ ಮೂರು ವರ್ಷಗಳಿಂದ ಆರ್ಥಿಕತೆಯ ಅಸಮರ್ಪಕ ನಿರ್ವಹಣೆಯನ್ನು ಏನೆಂದು ವಿವರಿಸಬಹುದು, ಸಾಂಕ್ರಾಮಿಕ ಹರಡುವುದಕ್ಕಿಂತ ಮೊದಲು ದೇಶಕ್ಕೆ ಏನಾಗಿತ್ತು, ದೇವರ ಸಂದೇಶವಾಹಕರಾಗಿ ಹಣಕಾಸು ಸಚಿವೆ ಇದಕ್ಕೆ ಉತ್ತರಿಸಬಲ್ಲರೇ ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
ಜಿಎಸ್ ಟಿ ಬಾಕಿ ಉಳಿಕೆಯಿಂದ ಆಗಿರುವ ನಷ್ಟವನ್ನು ಭರಿಸಲು ರಾಜ್ಯ ಸರ್ಕಾರದ ಬಳಿ ಸಾಲ ಕೇಳುವ ಕೇಂದ್ರ ಸರ್ಕಾರದ ನಡೆಯನ್ನು ಕೂಡ ಚಿದಂಬರಂ ಟೀಕಿಸಿದ್ದಾರೆ. ಹಣಕಾಸು ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳಲು ನೋಡುತ್ತಿದೆ ಎಂದಿದ್ದಾರೆ. ಇದು ಜನತೆಗೆ ಕೇಂದ್ರ ಸರ್ಕಾರ ಮಾಡುತ್ತಿರುವ ದ್ರೋಹವಾಗಿದ್ದು ಕಾನೂನಿನ ನೇರ ಉಲ್ಲಂಘನೆ ಎಂದಿದ್ದಾರೆ.