ಕಾಪು: ಅಕ್ರಮ ದಾಸ್ತಾನು 2.87 ಲಕ್ಷ ರೂ.ಮೌಲ್ಯದ ಪಡಿತರ ಅಕ್ಕಿ ವಶ
ಪಡುಬಿದ್ರಿ ಸೆ.21(ಉಡುಪಿ ಟೈಮ್ಸ್ ವರದಿ): ಕಾಪು ತಾಲೂಕಿನ ನಡ್ಸಾಲು ಗ್ರಾಮದ ಕನ್ನಂಗಾರ್ ಎಂಬಲ್ಲಿ ಸರಕಾರದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಸ್ಥಳಕ್ಕೆ ದಾಳಿ ಮಾಡಿದ ಅಧಿಕಾರಿಗಳು 2,87,606 ರೂ. ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಾಪುವಿನ ಆಹಾರ ನಿರೀಕ್ಷಕರಾದ ಟಿ.ಲೀಲಾನಂದ ಅವರು, ಕಾಪು ಪೊಲೀಸರ ಸಹಕಾರದೊಂಡಿಗೆ ನಡ್ಸಾಲು ಗ್ರಾಮದ ಕನ್ನಂಗಾರ್ ಎಂಬಲ್ಲಿನ ಮೊಹಮದ್ ಶಫೀಕ್ ಎಂಬವರ ಮನೆಗೆ ದಾಳಿ ನಡೆಸಿ ಪರಿಶೀಲಿಸಿದಾಗ ಮನೆಯ ಹೊರಾಂಗಣ ಮತ್ತು ಎದುರು ಇರುವ ಗೋದಾಮಿನಲ್ಲಿ 2,87,606 ರೂ. ಮೌಲ್ಯದ 13,073 ಕೆ.ಜಿ. ಅನ್ನಭಾಗ್ಯ ಯೋಜನೆಯಡಿ ಸಾರ್ವಜನಿಕರಿಗೆ ವಿತರಿಸುವ ಪಡಿತರ ಅಕ್ಕಿ ಪತ್ತೆಯಾಗಿದೆ.
ಈ ವೇಳೆ ಪೊಲೀಸರು ಹಾಗೂ ಅಧಿಕಾರಿಗಳು ಪತ್ತೆಯಾದ ಅಕ್ಕಿ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.