ತಿರುಪತಿಗೆ 1.02 ಕೋಟಿ ರೂ.ದೇಣಿಗೆ ನೀಡಿದ ಮುಸ್ಲಿಂ ಕುಟುಂಬ
ತಿರುಮಲ ಸೆ.21: ಮುಸ್ಲಿಂ ಕುಟುಂಬವೊಂದು ತಿರುಪತಿ ದೇವಸ್ಥಾನಕ್ಕೆ 1.02 ಕೋಟಿ ರೂಪಾಯಿಯನ್ನು ದೇಣಿಗೆ ನೀಡುವ ಮೂಲಕ ಸಾಮರಸ್ಯವನ್ನು ಮೆರೆದಿದ್ದಾರೆ.
ಸೆ.20 ರಂದು ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀ ವೆಂಕಟೇಶ್ವರನ ಪರಮ ಭಕ್ತರಾದ ಚೆನ್ನೈ ಮೂಲದ ಅಬ್ದುಲ್ ಘನಿ ಮತ್ತು ನುಬಿನಾ ಬಾನು ದಂಪತಿಗಳು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಗೆ ದೇಣಿಗೆಯ 1.02 ಕೋಟಿ ರೂ.ಗಳ ಚೆಕ್ ವಿತರಣೆ ಮಾಡಿದರು.
ದೇವಾಲಯ ಆವರಣ ರಂಗನಾಯಕುಲ ಮಂಟಪಂನಲ್ಲಿ ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಧರ್ಮ ರೆಡ್ಡಿ ಅವರನ್ನು ಭೇಟಿ ಚೆಕ್ ನ್ನು ಹಸ್ತಾಂತರ ಮಾಡಿದರು.
1.02 ಕೋಟಿ ರೂ. ದೇಣಿಗೆಯಲ್ಲಿ ಭಕ್ತಾದಿಗಳಿಗೆ ಉಚಿತ ಅನ್ನಸಂತರ್ಪಣೆ ಮಾಡುವ ಶ್ರೀ ವೆಂಕಟೇಶ್ವರ ಅನ್ನ ಪ್ರಸಾದಂ ಟ್ರಸ್ಟ್ಗೆ 15 ಲಕ್ಷ ರೂ., ಹಾಗೂ ಉಳಿದ 87 ಲಕ್ಷ ರೂ. ಶ್ರೀ ಪದ್ಮಾವತಿ ಅತಿಥಿ ಗೃಹದಲ್ಲಿನ ಅಡುಗೆಮನೆಯಲ್ಲಿ ಹೊಸ ಪೀಠೋಪಕರಣಗಳು ಮತ್ತು ಇನ್ನಿತರ ವಸ್ತುಗಳಿಗೆ ಮೀಸಲಾಗಿದೆ ಎಂದು ತಿಳಿದು ಬಂದಿದೆ.
ಇದೀಗ ದಂಪತಿಗಳು ಧರ್ಮ ಬೇರೆಯಾದರೂ ಭಕ್ತಿ ಒಂದೇ ಎಂದು ಸಾರಿದ್ದು, ಎಲ್ಲರ ಗಮನದ ಸೆಳೆದಿರುವುದಲ್ಲದೆ, ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.