ಉಡುಪಿ, ದ.ಕ ಸಹಿತ 10 ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ಘೋಷಣೆ
ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡು ಸೇರಿ 10 ಜಿಲ್ಲೆಗಳಲ್ಲಿ ಇದೇ 27 ಮತ್ತು 28ರಂದು ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಳ್ಳಾರಿ. ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಗುರುವಾರದವರೆಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹೆಚ್ಚಾಗಿ ಇರಲಿದೆ ಎಂದು ಮಾಹಿತಿ ತಿಳಿಸಿವೆ.
ಬಾಗಲಕೋಟೆ, ಬೀದರ್, ಕಲಬುರ್ಗಿ, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸುಡುಗಾಳಿ ಬೀಸಲಿದ್ದು, ಸಾರ್ವಜನಿಕರು ಬಿಸಿಲಿಗೆ ಮೈಯೊಡ್ಡದಂತೆ ಇಲಾಖೆ ಎಚ್ಚರಿಸಿದೆ. ಕಲಬುರ್ಗಿಯಲ್ಲಿ ಮಂಗಳವಾರ 44.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಹಾಗೂ ಮಡಿಕೇರಿಯಲ್ಲಿ 28 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.