ಶಿರ್ವ: ರಸ್ತೆ ದುರಾವಸ್ಥೆಗೆ ಸಾರ್ವಜನಿಕರ ಆಕ್ರೋಶ
ಶಿರ್ವ ಸೆ.19(ಉಡುಪಿ ಟೈಮ್ಸ್ ವರದಿ): ಇಲ್ಲಿನ ಮಸೀದಿ ಮತ್ತು ವಿನಾಯಕ ದೇವಸ್ಥಾನದ ಸಮೀಪದ ರಸ್ತೆ ದುರಾವಸ್ಥೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿರ್ವದ ಜೋಡು ಪೆಲತಮರ ಪರಿಸರದ ಬಸ್ ತಂಗುದಾಣ ಮುಂದೆ ಹಾದು ಹೋಗುವ ಈ ರಸ್ತೆ ಶಿರ್ವ ಪೇಟೆಯನ್ನು ಸಂಪರ್ಕಿಸುತ್ತದೆ. ಈ ರಸ್ತೆಯ ಹೊಂಡ ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸ ಬೇಕಾಗುತ್ತದೆ. ಅಲ್ಲದೆ ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಅವರನ್ನು ಸಾಗಿಸುವ ಶಾಲಾ ವಾಹನಗಳು, ದ್ವಿಚಕ್ರ, ರಿಕ್ಷಾ ಚಾಲಕರು ಹರಸಾಹಸ ಪಟ್ಟು ಸಂಚರಿಸುವಂತಾಗಿದೆ. ಈ ರಸ್ತೆಯಲ್ಲಿ ಸ್ವಲ್ಟ ನಿಯಂತ್ರಣ ಕಳೆದುಕೊಂಡರೂ ವಾಹನ ಸವಾರರಿಗೆ ಪ್ರಾಣಕ್ಕೆ ಕುತ್ತು ಕಟ್ಟಿಟ್ಟ ಬುತ್ತಿಯಾಗಿದೆ. ಈ ರಸ್ತೆಯಲ್ಲಿ ವಾಹನ ಸವಾರರಿಗೆ ಮಾತ್ರ ಅಲ್ಲದೆ ಪಾದಾಚಾರಿ ಗಳಿಗೂ ಅಪಾಯವನ್ನು ತಂದೊಡ್ಡಬಹುದಾದ ಸಾಧ್ಯತೆ ಇದೆ ಎಂದು ವಾಹನ ಸವಾರರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಈ ರಸ್ತೆ ಅವ್ಯವಸ್ಥೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅಲ್ವಿನ್ ದಾಂತಿ ಪೆರ್ನಾಲು ಎಂಬವರು, ಶಿರ್ವ ಪೇಟೆಯಲ್ಲಿ ಹೊಸ ತಂಗುದಾಣ ಅಲ್ಲಲ್ಲಿ ಹೈಮಾಸ್ಕ್ ಕಾಂಕ್ರೀಟ್ ರಸ್ತೆ ಮಾಡಿ ಪೇಟೆ ಜನತೆಗೆ ಒಳ್ಳೇದು ಮಾಡಿದಿರಿ ಆದರೆ ಈ ಪೇಟೆಯನ್ನು ಸಂಪರ್ಕಿಸುವ ಮಸೀದಿ ಮತ್ತು ವಿನಾಯಕ ದೇವಸ್ಥಾನದ ಸಮೀಪದ ರಸ್ತೆ ಸ್ಥಿತಿ ಮಾತ್ರ ಯಾರಿಗೂ ಬೇಡ ಆಗಿದೆ. ಸರಕಾರಕ್ಕೆ ಪೇಟೆಯವರು ಮಾತ್ರ ತೆರಿಗೆ ಕಟ್ಟೋಲ್ಲ ಜನಸಾಮಾನ್ಯರು ಕೂಡ ತೆರಿಗೆ ಕಟ್ಟುತ್ತಾರೆ. ಈ ಬಗ್ಗೆ ಕೇಳಿದರೆ ಅದು ಜಿಲ್ಲಾ ಪಂಚಾಯತ್ ರಸ್ತೆ, ಪಿಡ್ಲ್ಯೂಡಿ ರಸ್ತೆ ಎಂದು ಹೇಳುತ್ತೀರಿ. ರಸ್ತೆ ಡಾಮರೀಕರಣ ಆಗಿ ಉದ್ಘಾಟನೆ ಆಗುವಾಗ ಜನಪ್ರತಿನಿದಿನಗಳ, ಅನುದಾನ ಕೊಟ್ಟ ಸಂಸದರ ಹೆಸರು ಫಲಕದಲ್ಲಿ ಹಾಕುತ್ತಿರಿ. ಕಡೇ ಪಕ್ಷ ಗುತ್ತಿಗೆದಾರನ ಹೆಸರು ಮತ್ತು ಫೋನ್ ನಂಬರ್ ಬೋರ್ಡಿನಲ್ಲಿ ಹಾಕಿದರೆ ಅವರಿಗಾದರೂ ತಿಳಿಸಬಹುದಲ್ಲವೇ..?. ನಾವು ರಸ್ತೆ ತೆರಿಗೆ, ವಾಹನ ತೆರಿಗೆ ಕಟ್ಟಿ ಸಂಚಾರ ಯೋಗ್ಯ ರಸ್ತೆ ಇಲ್ಲದಿದ್ದರೆ ಯಾರಿಗೆ ದೂರು ಕೊಡಬೇಕು…? ಎಂದು ಪ್ರಶ್ನಿದ್ದಾರೆ. ಹಾಗೂ ಈ ಬಗ್ಗೆ ಸಂಬಂಧ ಪಟ್ಟವರು ಶೀಘ್ರ ತಾತ್ಕಾಲಿಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.