ಕಟೀಲು: ಯಕ್ಷಗಾನ ಪ್ರದರ್ಶನದ ಕಾಲ ಮಿತಿ ರದ್ದುಗೊಳಿಸಲು ಆಗ್ರಹ

ಮಂಗಳೂರು ಸೆ.19: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷಗಾನ ಪ್ರದರ್ಶನವನ್ನು ಕಾಲ ಮಿತಿಗೊಳಪಡಿಸುವ ನಿರ್ಧಾರವನ್ನು ಕೈಬಿಡ ಬೇಕೆಂಬ ಆಗ್ರಹ ಕೇಳಿಬಂದಿದೆ.

ಕದ್ರಿ ದೇವಸ್ಥಾನದಲ್ಲಿ ನಡೆದ ಯಕ್ಷಗಾನ ಬಯಲಾಟ ಸೇವಾ ಸಮಿತಿ ಮತ್ತು ಹತ್ತು ಸಮಸ್ತರ ಪ್ರತಿನಿಧಿಗಳು ಹಾಗೂ ಯಕ್ಷಗಾನ ಸೇವಾರ್ಥಿಗಳ ಸಭೆಯಲ್ಲಿ ಈ ಆಗ್ರಹ ಕೇಳಿಬಂದಿದೆ. ಸಭೆಯಲ್ಲಿ ಸೇವಾರ್ಥಿ ಅಶೋಕ್ ಕೃಷ್ಣಾಪುರ ಅವರು ಮಾತನಾಡಿ, ಈ ಸಭೆ ಯಾರ ವಿರುದ್ಧವೂ ಅಲ್ಲ, ಇದು ಭಕ್ತರ ಮನಸ್ಸಿನ ಭಾವನೆಯನ್ನು ದಾಖಲಿಸಿಕೊಳ್ಳುವ ಸಭೆ. ಇಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಮೇಳದ ಆಡಳಿತ ಮಂಡಳಿ, ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದವರ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು.

ಬಳಿಕ ಸಭೆಯಲ್ಲಿ ಕಾಲಮಿತಿ ನಿರ್ಧಾರದ ಬಗ್ಗೆ 7 ದಿನಗಳ ಒಳಗೆ ಸಂಬಂಧಿಸಿದವರು ಮಾಹಿತಿ ನೀಡಬೇಕೆಂದು ಮನವಿ ಮಾಡಲಾಯಿತು. ಹಾಗೂ ಮುಂದಿನ ಚಟುವಟಿಕೆಗಳಿಗಾಗಿ 15 ಮಂದಿಯ ಸಮನ್ವಯ ಸಮಿತಿ ರಚಿಸಲಾಯಿತು. ನಂತರ ಕಟೀಲು ಮೇಳದ ಯಕ್ಷಗಾನ ಇಡೀ ರಾತ್ರಿಯ ಬಯಲಾಟದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಈ ಹಿಂದೆ ನಡೆದುಕೊಂಡು ಬಂದ ರೀತಿಯಂತೆಯೇ ಮುಂದುವರಿ ಯಬೇಕು. ಯಕ್ಷಗಾನವನ್ನು ರಾತ್ರಿ 10.30ರ ವರೆಗೆ ನಡೆಸುವ/ಕಾಲಮಿತಿ ನಿರ್ಧಾರ ಮರು ಪರಿಶೀಲಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.

ಹಿರಿಯ ಸೇವಾರ್ಥಿ ಲೋಕನಾಥ ಶೆಟ್ಟಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕದ್ರಿ ದೇಗುಲದ ಟ್ರಸ್ಟಿ ರಾಜೇಶ್ ಕೊಂಚಾಡಿ, ಸೇವಾರ್ಥಿಗಳಾದ ಕೃಷ್ಣಪ್ಪ ಪೂಜಾರಿ, ದುರ್ಗಾಪ್ರಸಾದ್ ಹೊಳ್ಳ, ಅಶೋಕ್ ಕೃಷ್ಣಾಪುರ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!