ಹಿರಿಯಡ್ಕ: ಚಿನ್ನಕ್ಕೆ ಹೊಳಪು ಮಾಡುವುದಾಗಿ ವಂಚಿಸಿಲು ಯತ್ನ- ದೂರು ದಾಖಲು
ಹಿರಿಯಡ್ಕ, ಸೆ.19(ಉಡುಪಿ ಟೈಮ್ಸ್ ವರದಿ) ಚಿನ್ನವನ್ನು ಪಾಲಿಶ್ ಮಾಡುವ ನೆಪದಲ್ಲಿ ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದ ಸಂಶಯದ ಮೇರೆಗೆ ಬಿಹಾರ ಮೂಲದ ಇಬ್ಬರ ವಿರುದ್ದ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಲ್ಲಿನ ಕಿಶೋರ್ ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಸೆ.17 ರಂದು ಸಂಜೆ ವೇಳೆ ಕಿಶೋರ್ ಅವರು ತಮ್ಮ ಮನೆಯ ಬಳಿ ಇದ್ದ ಸಮಯದಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಹಿಂದಿ ಭಾಷೆಯಲ್ಲಿ ಮಾತನಾಡುತ್ತಾ, ನಿಮ್ಮಲ್ಲಿ ಚಿನ್ನವಿದ್ದರೆ ಕೊಡಿ ಅದನ್ನು ಪಾಲಿಶ್ ಮಾಡಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಅದಕ್ಕೆ ಕಿಶೋರ್ ಅವರು ಅವರಲ್ಲಿ ನೀವು ಯಾವ ರೀತಿಯಲ್ಲಿ ಚಿನ್ನಪಾಲಿಶ್ ಮಾಡುತ್ತೀರಿ ಎಂದು ಕೇಳಿದಾಗ ಅವರು ತಮ್ಮಲ್ಲಿದ್ದ ಬ್ಯಾಗ್ ನಲ್ಲಿದ್ದ ದ್ರಾವಣ ಇತರ ಸಲಕರಣೆಗಳನ್ನು ತೆರೆದು ತೋರಿಸಿ ಇವುಗಳಿಂದ ಚಿನ್ನ ಪಾಲೀಶ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ಈ ವೇಳೆ ಅವರ ಮೇಲೆ ಸ್ವಲ್ಪ ಸಂಶಯ ಬಂದು ಅವರ ಹೆಸರು ಕೇಳಿದಾಗ ಅವರಲ್ಲಿ ಓರ್ವನ ಹೆಸರು ಆನಂದ ಕಿಶೋರ್ ಮೆಹ್ತಾ ಹಾಗೂ ಮತ್ತೋರ್ವನ ಹೆಸರು ಮನೋಜ್ ಯಾದವ್ ಎಂದೂ, ಅವರು ಬಿಹಾರದಿಂದ ಬಂದಿರುವುದಾಗಿ ಹೇಳಿದ್ದಾರೆ.
ಇದರಿಂದ ಸಂಶಯಗೊಂಡು ಕಿಶೋರ್ ಅವರು, ಹಿರಿಯಡ್ಕ ಪಿಎಸ್ಐ ರವರಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ಅವರಿಬ್ಬರು ಸಿಟ್ಟುಗೊಂಡು ಕಿಶೋರ್ ಅವರಿಗೆ ಹಿಂದಿಯಲ್ಲಿ ಕೆಟ್ಟದಾಗಿ ಬೈದು ಅಲ್ಲಿಂದ ಹೋಗಲು ಪ್ರಯತ್ನಿಸಿದ್ದರು. ಹಾಗೂ ಅವರು ಚಿನ್ನಪಾಲೀಶ್ ಮಾಡುವುದಾಗಿ ಜನರನ್ನು ನಂಬಿಸಿ ಮೋಸ ಮಾಡುವ ಉದ್ದೇಶವನ್ನು ಹೊಂದಿದ್ದಾರೆ ಎಂಬುದಾಗಿ ಕಿಶೋರ್ ಅವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.