ಪ್ರಧಾನಿ ಮೋದಿ ಜನ್ಮದಿನ: 1 ಲಕ್ಷಕ್ಕೂ ಹೆಚ್ಚು ಮಂದಿಯಿಂದ ರಕ್ತದಾನ | Prajavani
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಶನಿವಾರ ಮಧ್ಯರಾತ್ರಿ ವರೆಗೆ ನಡೆದ ‘ರಕ್ತದಾನ ಅಮೃತ ಮಹೋತ್ಸವ’ದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದ್ದಾರೆ. ಈ ಮೂಲಕ ಒಂದೇ ದಿನದಲ್ಲಿ ಅತಿಹೆಚ್ಚು ಮಂದಿ ರಕ್ತದಾನ ಮಾಡಿದ ವಿಶ್ವದಾಖಲೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ.
2014ರ ಸೆಪ್ಟಂಬರ್ 6ರಂದು 87,059 ಮಂದಿ ರಕ್ತದಾನ ಮಾಡಿದ್ದು ಈ ಹಿಂದಿನ ದಾಖಲೆಯಾಗಿತ್ತು. ಅಖಿಲ ಭಾರತೀಯ ತೆರಾಪಂಥ ಯುವಕ ಪರಿಷದ್ ಅಡಿಯಲ್ಲಿ ರಾಷ್ಟ್ರದಾದ್ಯಂತ 300 ನಗರಗಳಲ್ಲಿ 556 ರಕ್ತದಾನ ಕೇಂದ್ರಗಳಲ್ಲಿ ಮಾಡಲಾಗಿತ್ತು.
ಮನ್ಸುಖ್ ಮಾಂಡವೀಯ ಅವರು ಸ್ವತಃ ಸಫ್ತರ್ಜಂಗ್ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದರು. ಬಳಿಕ ಆರೋಗ್ಯ ಸೇತು ಆ್ಯಪ್ ಅಥವಾ ಇ-ರಕ್ತೋಶ್ ಪೋರ್ಟಲ್ ಮೂಲಕ ರಕ್ತದಾನ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ನಾಗರಿಕರನ್ನು ಒತ್ತಾಯಿಸಿದರು. ರಾಷ್ಟ್ರೀಯ ಸ್ವಯಂ ರಕ್ತದಾನ ದಿನ, ಅಕ್ಟೋಬರ್ 1ರ ವರೆಗೆ ರಕ್ತದಾನ ಕಾರ್ಯಕ್ರಮ ಮುಂದುವರಿಯಲಿದೆ.
‘ಹೊಸ ವಿಶ್ವದಾಖಲೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು 87,000ಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಅಮೃತ ಮಹೋತ್ಸವ ದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಲು ಸಂತಸವಾಗುತ್ತಿದೆ. ನಮ್ಮ ಪ್ರಧಾನ ಸೇವಕನಿಗೆ ರಾಷ್ಟ್ರ ಕೊಟ್ಟಿರುವ ಬೆಲೆಕಟ್ಟಲಾಗದ ಉಡುಗೊರೆ ಎಂದರು.