ಕುಂದಾಪುರ: ವಕ್ವಾಡಿಯಲ್ಲಿ ಜನಸಂಪರ್ಕ ಸಭೆ
ಕುಂದಾಪುರ(ಉಡುಪಿ ಟೈಮ್ಸ್ ವರದಿ): ಠಾಣಾ ವ್ತಾಪ್ತಿಯ ವಕ್ವಾಡಿಯ ಗ್ರಾಮಸ್ಥರಿಗಾಗಿ ಜನಸಂಪರ್ಕ ಸಭೆ ಶನಿವಾರ ಠಾಣಾಧಿಕಾರಿ ಸದಾಶಿವ್ ಗೌರೋಜಿ ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಅವರು “ಸುತ್ತಮುತ್ತಲು ನಡೆಯುತ್ತಿರುವ ಅಪರಾಧದ ವಿಚಾರಗಳ ಬಗ್ಗೆ ಸಾರ್ವಜನಿಕರು ಯಾವುದೇ ಭಯ ಪಡದೆ ಠಾಣೆಗೆ ತಿಳಿಸಿದಲ್ಲಿ ಅವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಅವಘಡಗಳು ಅಪರಾಧಗಳು ನಡೆದ ಸಂದರ್ಭದಲ್ಲಿ 112 ಕರೆ ಮಾಡಿದಲ್ಲಿ ಕ್ಲಪ್ತ ಸಮಯಕ್ಕೆ ಇಲಾಖೆ ಹಾಜರಿದ್ದು ಸೇವೆಗೆ ಸಿದ್ಧವಿರುತ್ತದೆ ಎಂಬುದಾಗಿ ತಿಳಿಸಿದರು.
ಪ್ರತಿ ಗ್ರಾಮಗಳಲ್ಲಿಯೂ ಮಫ್ತಿಯಲ್ಲಿ ಹಾಗೂ ಬೀಟ್ ಪೊಲೀಸ್ ಸಂಚರಿಸುತ್ತಿದ್ದು ಅಪರಾಧದ ನಿಯಂತ್ರಣಕ್ಕಾಗಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು “ಎಂದು ಮನವಿಯನ್ನು ಮಾಡಿದರು.
ಗಾಂಜಾ ಸೇವನೆಯ ಬಗ್ಗೆ ಅಥವಾ ವ್ಯವಹಾರದ ಕುರಿತಾಗಿ ಮಾಹಿತಿ ಇದ್ದಲ್ಲಿ ಅದನ್ನು ದಯವಿಟ್ಟು ಸ್ಥಳೀಯ ಠಾಣೆಗಳಿಗೆ ತಿಳಿಸತಕ್ಕದ್ದು ಎಂದವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಮುಕ್ತ ಮಾತುಕತೆ ನಡೆಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಸ್ಥಳೀಯರಾದ ಗಿರೀಶ್ ಐತಾಳ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಶೆಟ್ಟಿ, ಕೋಟಿ ನಾರಾಯಣ, ಸಿಬ್ಬಂದಿ ಗಣೇಶ್ ಸಾವಿಕೇರಿ ಉಪಸ್ಥಿತರಿದ್ದರು.