ಉಡುಪಿ: ಝಮ್ಯಾಟೊ ಫುಡ್ ಡೆಲಿವರಿ ಬ್ಯಾಗ್’ನಲ್ಲಿ ಗಾಂಜಾ ಮಾರಾಟ- ಮೂವರ ಬಂಧನ
ಉಡುಪಿ, ಸೆ.18: ಝಮ್ಯಾಟೊ ಫುಡ್ ಡೆಲಿವರಿ ಬ್ಯಾಗ್ ನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಉಡುಪಿ ಸೆನ್ ಅಪರಾಧ ಠಾಣೆ ಪೊಲೀಸರು ಇಂದ್ರಾಳಿ- ಮಂಚಿ ರಸ್ತೆಯಲ್ಲಿ ಬಂಧಿಸಿದ್ದಾರೆ.
ರವಿ ಶಂಕರ್, ಅಂಜಲ್ ಬೈಜು ಹಾಗೂ ದೇವಿಪ್ರಸಾದ್ ಎಂಬವರು ಬಂಧಿತ ಆರೋಪಿಗಳು.
ರವಿಶಂಕರ್ ಕೇರಳದ ಪಾಲಕ್ಕಾಡ್ ನಿಂದ ಗಾಂಜಾವನ್ನು ರೈಲಿನ ಮೂಲಕ ಉಡುಪಿಗೆ ತಂದು ಉಡುಪಿಯಲ್ಲಿ ಗಾಂಜಾ ಸೇವಿಸುವವರಿಗೆ ಹಾಗೂ ಮಾರಾಟ ಮಾಡುವವರಿಗೆ ಕೊಡುತ್ತಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ.
ಈತ ಮಣಿಪಾಲ ಸಮೀಪದ ಮಂಚಿಯಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡು ಕೆಲವು ಸ್ನೇಹಿತರೊಂದಿಗೆ ಉಳಿದುಕೊಂಡಿದ್ದನು. ಇಂದ್ರಾಳಿಯಿಂದ ಮಂಚಿಗೆ ಹೋಗುವ ರಸ್ತೆಯಲ್ಲಿ ಈ ಮೂವರು ಆರೋಪಿಗಳು ರೊಮ್ಯಾಟೊ ಫುಡ್ ಡೆಲಿವರಿ ಬಾಗ್ ನಲ್ಲಿ ಗಾಂಜಾವನ್ನು ಇಟ್ಟುಕೊಂಡು ಗಿರಾಕಿ ಹಾಗೂ ಪೆಡ್ಲರ್ ಗಳಿಗಾಗಿ ಕಾಯುತ್ತಿದ್ದರು.ಈ ಬಗ್ಗೆ ಮಾಹಿತಿ ಪಡೆದ ಪತ್ರಾಂಕಿತ ಅಧಿಕಾರಿ ಪ್ರೊ.ಪ್ರಕಾಶ್ ರಾವ್ ಹಾಗೂ ಸೆನ್ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಸುಮಾರು 1 ಕೆಜಿ 277 ಗ್ರಾಂ ತೂಕದ ಗಾಂಜಾ, 2 ಬೈಕ್, ಝಮೆಟೊ ಫುಡ್ ಡೆಲಿವರಿ ಬಾಗ್, 4 ಮೊಬೈಲ್ ಗಳನ್ನು ಮತ್ತು ಮೂವತ್ತು ಸಾವಿರ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.