ಉಡುಪಿ: ಅ.31-ನ.8 ವರೆಗೆ ದೇಶದಾದ್ಯಂತ ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನ
ಉಡುಪಿ ಸೆ.17: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಅ.31 ರಿಂದ ನ.8 ರ ವರೆಗೆ ದೇಶದಾದ್ಯಂತ ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಹಿಂದೂ ಜನಜಾಗೃತಿ ಸಮಿತಿ ರಾಜ್ಯ ಸಮನ್ವಯಕ ಗುರುಪ್ರಸಾದ ಗೌಡ ಅವರು, ಈ ಅಭಿಯಾನದಲ್ಲಿ ದೇಶದಾದ್ಯಂತ 2000 ಕ್ಕೂ ಅಧಿಕ ಸ್ಥಳಗಳಲ್ಲಿ ಹಿಂದೂ ರಾಷ್ಟ್ರದ ಪ್ರತಿಜ್ಞೆ ತೆಗೆದುಕೊಳ್ಳಲಾಗುವುದು. ಈ ಅಭಿಯಾನದಲ್ಲಿ ಹಿಂದೂ ರಾಷ್ಟ್ರದ ಅವಶ್ಯಕತೆ, ಹಿಂದೂ ಧರ್ಮದ ಮಹಾನತೆ, ಶೌರ್ಯ ಜಾಗೃತಿಯ ಅಗತ್ಯತೆ, ಲವ್ ಜಿಹಾದ್, ಹಲಾಲ್ ಜಿಹಾದ್ ಇತ್ಯಾದಿ ವಿಷಯಗಳಲ್ಲಿ 3 ಸಾವಿರ ಸ್ಥಳಗಳಲ್ಲಿ ಪ್ರವಚನಗಳು, 2000 ಕ್ಕೂ ಅಧಿಕ ಸ್ಥಳಗಳಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಮೂಡಿಸುವ ಫಲಕಗಳ ಪ್ರದರ್ಶನ ನಡೆಯಲಿದೆ ಎಂದರು.
ಹಾಗೂ 1000 ದೇವಾಲಯಗಳು ಮತ್ತು 250 ಕ್ಕೂ ಅಧಿಕ ಐತಿಹಾಸಿಕ ಸ್ಥಳಗಳ ಸ್ವಚ್ಛತೆ, 350 ಮಹಿಳಾ ಸಂಘಟನೆಗಳ ಉಪಕ್ರಮ ಮತ್ತು ಸಮ್ಮೇಳನ, 50 ಕಡೆಗಳಲ್ಲಿ ವಧರ್ಂತ್ಯುತ್ಸವ ಸಮಾರಂಭಗಳು, 50 ಕಡೆಗಳಲ್ಲಿ ಹಿಂದೂ ರಾಷ್ಟ್ರ ವಿಚಾರ ಸಂಕಿರಣ, 70 ಕಡೆ ಬೀದಿ ನಾಟಕಗಳು, 200 ಕ್ಕೂ ಅಧಿಕ ವಿವಿಧ ಸಂಘಟನೆಗಳ ಸಭೆಗಳು, 60 ಕ್ಕೂ ಹೆಚ್ಚು ವಕೀಲರ ಸಭೆ ಇತ್ಯಾದಿ ಕಾರ್ಯಕ್ರಮಗಳನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗುವುದು. ಹಿಂದೂ ಸಮಾಜದ ಮನಸ್ಸಿನಲ್ಲಿ ಹಿಂದೂ ರಾಷ್ಟ್ರ ಸಂಕಲ್ಪವನ್ನು ಬಲಪಡಿಸುವ ಮತ್ತು ಹಿಂದೂ ಸಮಾಜವು ಹಿಂದೂ ರಾಷ್ಟ್ರಕ್ಕಾಗಿ ಸಕ್ರಿಯವಾಗಬೇಕೆನ್ನುವ ದೃಷ್ಟಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸನಾತನ ಸಂಸ್ಥೆ ರಾಷ್ಟ್ರೀಯ ವಕ್ತಾರ ಚೇತನ್ ರಾಜಹಂಸ, ಮುಖಂಡ ರಾಮಕೃಷ್ಣ ಶೆಟ್ಟಿ ಕುಂದಾಪುರ, ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕ ವಿಜಯ್ ಕುಮಾರ್ ಉಪಸ್ಥಿತರಿದ್ದರು.