ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರ ತೆರವಿಗೆ ಸರ್ಕಾರ ಒಪ್ಪಿಗೆ
ಸುರತ್ಕಲ್ ಸೆ.16: ನಿರಂತರ ಹೋರಟದ ಬಳಿಕ ಕೊನೆಗೂ ಸುರತ್ಕಲ್ ನ ರಾಷ್ಟ್ರೀಯ ಹೆದ್ದಾರಿ 66ರ ಟೋಲ್ ಸಂಗ್ರಹ ಕೇಂದ್ರವನ್ನು ತೆರವುಗೊಳಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ.
ಈ ಬಗ್ಗೆ ವಿಧಾನಸಭಾ ಕಲಾಪದ ಶೂನ್ಯ ವೇಳೆಯಲ್ಲಿ ವಿರೋಧ ಪಕ್ಷದ ಉಪನಾಯಕರಾದ ಯು.ಟಿ. ಖಾದರ್ ಅವರು ಪ್ರಸ್ತಾಪಿಸಿ, ಪ್ರಸ್ತುತ ಈಗಲೂ ಮೂರು ದಿನಗಳಿಂದ ಅಕ್ರಮ ಟೋಲ್ ತೆರವಿಗೆ ಧರಣಿ ನಡೆಯುತ್ತಿರುವುದನ್ನು ಉಲ್ಲೇಖಿಸಿ ಪ್ರಶ್ನಿಸಿದ್ದಾರೆ. ನಂತರ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ 60 ಕಿ.ಮೀ ಅಂತರದ ಒಳಗೆ ಇರುವ ಟೋಲ್ ತೆರವಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಒಪ್ಪಿಗೆ ಸೂಚಿಸಿದೆ. ಹಾಗಾಗಿ ಶೀಘ್ರದಲ್ಲೇ ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರವನ್ನು ತೆರವುಗೊಳಿಸಲಾಗುವುದು ಎಂದು ಉತ್ತರಿಸಿದ್ದಾರೆ.
ಆದರೆ ಇದು ಕೇವಲ ಭರವಸೆ ಆಗಲಿದೆಯೋ ಅಥವಾ ಸಾರ್ವಜನಿಕರ ಬೇಡಿಕೆಯಂತೆ ಶೀಘ್ರದಲ್ಲಿ ಈ ಟೋಲ್ ತೆರವುಗೊಳ್ಳಲಿದೆಯೋ ಎಂಬುದು ಕಾದು ನೋಡಬೇಕಿದೆ.
2015 ರ ಡಿಸೆಂಬರ್ ನಲ್ಲಿ ಸುರತ್ಕಲ್ ಟೋಲ್ ನಲ್ಲಿ ಸುಂಕ ಸಂಗ್ರಹ ಶುರುವಾಗಿತ್ತು. ಇದು ಪಟ್ಟಣದ ಮಧ್ಯ ಭಾಗದಲ್ಲಿ ಇರುವುದರಿಂದ ಇದಕ್ಕೆ ಆರಂಭದಲ್ಲೇ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಕೇವಲ 9 ಕಿಲೋಮೀಟರ್ ಅಂತರದಲ್ಲಿ 2 ಟೋಲ್ ಗೆ(ಸುರತ್ಕಲ್ – ಹೆಜಮಾಡಿ ಟೋಲ್ ಗೇಟ್) ಹಣ ಕೊಡುವುದು ನಾಗರೀಕರಿಗೆ ಹೊರೆ ಎಂಬ ಕಾರಣದಿಂದ ಸ್ಥಳೀಯ ಮಟ್ಟದಲ್ಲಿ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು. ಆರಂಭದಲ್ಲಿ ಹೆಜಮಾಡಿಯಲ್ಲಿ ಟೋಲ್ ಶುರುವಾದ ನಂತರ ಸುರತ್ಕಲ್ ಟೋಲ್ ಕೇಂದ್ರವನ್ನು ತೆರವುಗೊಳಿಸಲಾಗುವುದು. ಅಲ್ಲಿಯವರೆಗೂ ತಾಂತ್ರಿಕವಾಗಿ ಸುಂಕ ಸಂಗ್ರಹಕ್ಕೆ ಅನುಮತಿ ಕೊಡಬೇಕೆಂದು ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು.
ಅಂದುಕೊಂಡಂತೆ ಆರು ತಿಂಗಳ ನಂತರ 2016 ಏಪ್ರಿಲ್ ನಲ್ಲಿ ಹೆಜಮಾಡಿಯಲ್ಲಿ ಟೋಲ್ ಸಂಗ್ರಹ ಕೇಂದ್ರ ಪ್ರಾರಂಭವಾಯಿತು. ಆದರೆ ಅದರ ನಂತರವೂ ಸುರತ್ಕಲ್ ಟೋಲ್ ನ್ನು ಹೆದ್ದಾರಿ ಪ್ರಾಧಿಕಾರ ತೆರವುಗೊಳಿಸಿರಲಿಲ್ಲ. ಅಲ್ಲಿಯವರೆಗೆ ಸುಂಕ ಸಂಗ್ರಹದ ವಿರುದ್ಧ ಅಸಂಘಟಿತರಾಗಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳೀಯರು ಟೋಲ್ ಸಂಗ್ರಹದ ವಿರುದ್ಧ ಹೋರಾಟ ಸಮಿತಿಯನ್ನು ರಚಿಸಿ ಹೋರಾಟ ಆರಂಭಿಸಿದರು ಆದರೆ ಇದು ಯಾವುದೇ ಪ್ರಯೋಜನವಾಗಿರಲಿಲ್ಲ.
ಈ ನಡುವೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಹಳದಿ ನಂಬರ್ ಪ್ಲೇಟ್ ಹೊರತುಪಡಿಸಿ ಏಂ 19 ಸಂಖ್ಯೆಯ (ಮಂಗಳೂರು ರಿಜಿಸ್ಟರೇಷನ್) ಎಲ್ಲಾ ವಾಹನಗಳಿಗೆ ಟೋಲ್ ಸಂಗ್ರಹಕ್ಕೆ ವಿನಾಯಿತಿ ನೀಡಲಾಯಿತು. ಆದರೆ ಟೋಲ್ ಸಂಗ್ರಹ ವಿರೋಧಿ ಹೋರಾಟ ಸಮಿತಿ ತಮ್ಮ ಪ್ರತಿಭಟನೆಯನ್ನೂ ಹಿಂತೆಗೆದುಕೊಳ್ಳಲಿಲ್ಲ. ಅಲ್ಲಿಂದ ಇಲ್ಲಿಯವರೆಗೂ ಸ್ಥಳೀಯ ಮಟ್ಟದಲ್ಲಿ ವಿನಾಯಿತಿ ಮುಂದುವರೆದರೂ ಇದರ ನಡುವೆ ಸ್ಥಳೀಯ ಗುತ್ತಿಗೆದಾರರು ಮೇಲಿಂದ ಮೇಲೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿ, ಅಲ್ಲಿನ ಚೀಫ್ ಡೈರೆಕ್ಟರ್ ಕಡೆಯಿಂದ ಟೋಲ್ ಸಂಗ್ರಹ ಕೇಂದ್ರಕ್ಕೆ ಪೊಲೀಸ್ ರಕ್ಷಣೆ ಮೂಲಕ ಟೋಲ್ ಸಂಗ್ರಹ ಮುಂದುವರೆಸಿತು.
ಟೋಲ್ ವಿರೋಧಿ ಹೋರಾಟಕ್ಕೆ ಬೆಂಬಲವಾಗಿ ಲಾರಿ ಮತ್ತು ಬಸ್ ಮಾಲಿಕರ ಸಂಘಗಳ ವತಿಯಿಂದ ಜಿಲ್ಲಾಧಿಕಾರಿ ಭೇಟಿ ಮಾಡಿತ್ತು. ಆದರೆ ಯಾವಾಗ ಗುತ್ತಿಗೆ ನವೀಕರಣ ಪ್ರಾರಂಭವಾಯಿತೋ ಆಗ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು. ಕೇಂದ್ರ ಸರ್ಕಾರ ಈ ಸುಂಕ ಸಂಗ್ರಹ ರಾಜಕೀಯವಾಗಿಯೂ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಅರಿತ ಹಿನ್ನೆಲೆಯಲ್ಲಿ ಈಗ ಟೋಲ್ ಸಂಗ್ರಹ ಕೇಂದ್ರವನ್ನು ತೆರವುಗೊಳಿಸಲು ಅನುಮತಿ ನೀಡಿದೆ ಎಂದು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ತಿಳಿಸಿದ್ದಾರೆ.
ಇದೀಗ ಟೋಲ್ ತೆರವಿಗೆ ಸರಕಾರ ಅನುಮತಿ ನೀಡಿರುವ ಬಗ್ಗೆ ಸ್ಥಳೀಯರು, ಡಿ.ವೈ.ಎಫ್.ಐ ರಾಜ್ಯಾಧ್ಯಕ್ಷ ಹಾಗೂ ಸುರತ್ಕಲ್ ಟೋಲ್ ಸಂಗ್ರಹ ವಿರೋಧಿ ಹೋರಾಟ ಸಮಿತಿ ಮುಖ್ಯಸ್ಥರೂ ಆದ ಮುನೀರ್ ಕಾಟಿಪಳ್ಳ ಅವರು ಪ್ರತಿಕ್ರಿಯೆ ನೀಡಿ, ಸ್ಥಳೀಯ ಜನಪ್ರತಿನಿಧಿಗಳಿಗೆ ಜನಗಳ ಹಿತಾಸಕ್ತಿಗಿಂತ ಕಾಪೆರ್Çರೇಟ್ ಕುಳಗಳ, ಗುತ್ತಿಗೆದಾರರ ಹಿತಾಸಕ್ತಿಯೇ ಮುಖ್ಯವಾದಾಗ ಇಷ್ಟು ದೀರ್ಘಕಾಲದ ಹೋರಾಟ ನಡೆಸಲೇಬೇಕಾಗುತ್ತದೆ. ಲೋಕೋಪಯೋಗಿ ಸಚಿವರ ಹೇಳಿಕೆ ಅಥವಾ ಹೆದ್ದಾರಿ ಸಚಿವಾಲಯದ ಹೇಳಿಕೆಯ ಹಿನ್ನೆಲೆಯಲ್ಲಿ ನಾವು ಪ್ರತಿಭಟನೆ ಹಿಂತೆಗೆದುಕೊಳ್ಳಲು ಆಗುವುದಿಲ್ಲ. ಈ ಹಿಂದೆ ಕೂಡಾ ಇದೇ ರೀತಿಯ ಭರವಸೆ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸಕ್ಕೆ ಸರ್ಕಾರ ಮುಂದಾಗಿತ್ತು. ಹಾಗಾಗಿಯೇ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ದಿಶಾ( DISHA )ಸಮಿತಿ ಸಭೆಯಲ್ಲೂ ಕೂಡಾ ಜಿಲ್ಲಾಧಿಕಾರಿ, ಸಂಸದರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ನಮ್ಮ ಬೇಡಿಕೆಯನ್ನು ಇಟ್ಟು, ಟೋಲ್ ಸಂಗ್ರಹ ಕೇಂದ್ರವನ್ನು ತೆರವುಗೊಳಿಸಲು ದಿನಾಂಕದ ಗಡುವು ಕೇಳಿದ್ದೆವು. ಆಗಲೂ ಸಹ ಅಧಿಕಾರಿಗಳು ಈಗ ಆಗ ಎಂದು ಮೀನಾಮೇಷ ಎಣಿಸಿದ ಹಿನ್ನೆಲೆಯಲ್ಲಿ ಅಕ್ಟೋಬರ್ 18 ನಾವು ನಿಮಗೆ ಕೊಡುವ ಕೊನೆಯ ದಿನಾಂಕ. ಅದರ ಒಳಗೆ ನೀವು ತೆರವುಗೊಳಿಸಿದರೆ ಸಂತೋಷ.. ಇಲ್ಲವಾದರೆ ಹೋರಾಟವನ್ನು ತೀವ್ರಗೊಳಿಸಿ, ನಾವೇ ಟೋಲ್ ಸಂಗ್ರಹ ಕೇಂದ್ರ ತೆರವುಗೊಳಿಸುತ್ತೇವೆ ಎಂದು ಗಡುವು ಕೊಡಲಾಗಿದೆ. ಹಾಗಾಗಿ ಮುಂದಿನ ಕೆಲವೇ ದಿನಗಳಲ್ಲಿ ಅಧಿಕಾರಿಗಳೇ ಇದನ್ನು ತೆರವುಗೊಳಿಸಿಲ್ಲ ಎಂದರೆ ನಾವು ಹೋರಾಟದ ಇನ್ನೊಂದು ಹೆಜ್ಜೆಗೆ ಮುಂದಡಿ ಇಡಲಾಗುವುದು” ಎಂದು ತಿಳಿಸಿದ್ದಾರೆ.
ಹಾಗೂ “ಇತ್ತೀಚೆಗೆ ಸುಳ್ಯದ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯ ಪ್ರತಿಭಟನೆ ಸಂದರ್ಭದಲ್ಲೂ ಟೋಲ್ ಸಂಗ್ರಹದ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ತಮ್ಮದೇ ಪಕ್ಷದ ಕಾರ್ಯಕರ್ತರಿಂದ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಛೀಮಾರಿ ಹಾಕಿಸಿಕೊಂಡ ನಂತರ ಇದು ರಾಜಕೀಯವಾಗಿ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಇದರಿಂದ ತಪ್ಪಿಸಿಕೊಳ್ಳಲು ಆಡಳಿತ ಪಕ್ಷ ಈ ಕೆಲಸಕ್ಕೆ ಮುಂದಾಗಿದೆ. ಇದರಿಂದ ಬಿಜೆಪಿ ತನಗೆ ಕ್ರೆಡಿಟ್ ತಗೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಸುಂಕ ಸಂಗ್ರಹ ಕೇಂದ್ರ ತೆರವಾದರೆ ಅದರ ಸಂಪೂರ್ಣ ಯಶಸ್ಸು ಸಿಗಬೇಕಿರುವುದು ಟೋಲ್ ಸಂಗ್ರಹ ವಿರೋಧಿ ಹೋರಾಟ ಸಮಿತಿಗೇ ಹೊರತು, ಬಿಜೆಪಿ ಪಕ್ಷಕ್ಕಲ್ಲ. 2018 ರಲ್ಲೂ ಸಹ ಇದೇ ರೀತಿ ಭರವಸೆ ನೀಡಿದ್ದರು. ಹಾಗಾಗಿ ಕೊನೆಯ ದಿನದ ವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಹೇಳಿದ್ದಾರೆ.