ಉಡುಪಿ: ಸುಕನ್ಯಾ ಸಮೃದ್ಧಿ ಯೋಜನೆಯ ಸಂಭ್ರಮಾಚರಣೆ
ಉಡುಪಿ, ಸೆ.16: ಭಾರತೀಯ ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಯೋಜನೆಯ ಸಂಭ್ರಮಾಚರಣೆಗೆ ದೇಶದ 75 ನಗರಗಳಲ್ಲಿ ಉಡುಪಿ ನಗರವೂ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ನಗರದ ಜಗನ್ನಾಥ, ಸಭಾಭವನದಲ್ಲಿ ಸುಕನ್ಯಾ ಸಮೃದ್ಧಿ ಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಎಲ್.ಕೆ. ದಾಸ್ ಅವರು, ಹೆಣ್ಣು ಮಕ್ಕಳ ಜನನ ಪ್ರಮಾಣದ ಮಾಹಿತಿಯನ್ನು ರಾಜ್ಯ ಸರಕಾರ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಪಡೆದು ಹೆಚ್ಚೆಚ್ಚು ಸುಕನ್ಯಾ ಸಮೃದ್ಧಿ ಖಾತೆಗಳನ್ನು ತೆರೆಯುವಂತೆ ಪ್ರೇರೇಪಿಸುವ ಮೂಲಕ ಉಡುಪಿಯನ್ನು ಸುಕನ್ಯಾ ಸಮೃದ್ಧಿ ಜಿಲ್ಲೆಯಾಗಿ ರೂಪಿಸಬೇಕು ಎಂದು ಕರೆ ನೀಡಿದರು. ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆಗಳಿಗೆ ಶೇ.7.6 ಬಡ್ಡಿ ನೀಡಲಾಗುತ್ತಿದೆ. ಆದ್ದರಿಂದ ಹೆಣ್ಣು ಮಕ್ಕಳು ಹುಟ್ಟಿದ ತಕ್ಷಣದಿಂದಲೇ ಖಾತೆ ತೆರೆದು, ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಅವರು ಮಾತನಾಡಿ, ಹೆಣ್ಣು ವಾತ್ಸಲ್ಯ ಮೂರ್ತಿ, ಬಹು ಕೌಶಲವನ್ನು ಹೊಂದಿರುವ ಜಗತ್ತಿನ ವಿಭಿನ್ನ ಶಕ್ತಿ. ಆಕೆ ಜೀವನದಲ್ಲಿ ಎಲ್ಲ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾಳೆ. ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಇನ್ನಷ್ಟು ಸಹಕಾರಿಯಾಗಲಿದೆ. ಹೆಣ್ಣಿನ ಮೇಲಿನ ಶೋಷಣೆ ನಿಲ್ಲಬೇಕು. ರಾಜಕೀಯದಲ್ಲಿ ಮಹಿಳೆಯರಿಗೆ ಇನ್ನಷ್ಟು ಮೀಸಲಾತಿ ಸಿಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ಮಾತನಾಡಿ ಶುಭಹಾರೈಸಿದರು.
ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ (ಪ್ರಭಾರ) ವೀಣಾ ವಿವೇಕಾನಂದ, ಎಂಐಟಿ ಪ್ರಾಧ್ಯಾಪಕ ಪ್ರೊ. ಬಾಲಕೃಷ್ಣ ಮುದ್ದೋಡಿ ಅವರನ್ನು ಅಂಚೆ ಇಲಾಖೆ ಪರವಾಗಿ ಸನ್ಮಾನಿಸಲಾಯಿತು. ಹಾಗೂ ವಿವಿಧ ಸ್ಪರ್ಧೆಯಲ್ಲಿ ವಿಜೇತ ರಾದವರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಅಂಚೆ ಅಧೀಕ್ಷಕ ನವೀನ್ ಚಂದರ್, ಅಂಚೆ ಉಪ ವಿಭಾಗ ಮುಖ್ಯಸ್ಥ ನವೀನ್ ವಿ.ಎಲ್., ಉಡುಪಿ ಪ್ರಧಾನ ಅಂಚೆ ಪಾಲಕ ಗುರುಪ್ರಸಾದ್, ಅಂಚೆ ವಿಭಾಗದ ಭಾರತಿ ನಾಯಕ್, ಪ್ರವೀಣ್ ಜತ್ತನ್ನ ಉಪಸ್ಥಿತರಿದ್ದರು.