ಹೆಚ್ಚುತ್ತಿರುವ ಕೊರೋನಾ: ರಿಕ್ರಿಯೇಷನ್ ಕ್ಲಬ್ ಮುಚ್ಚಲು ಜಿಲ್ಲಾಧಿಕಾರಿ ಆದೇಶ
ಮಂಗಳೂರು: (ಉಡುಪಿ ಟೈಮ್ಸ್ ವರದಿ)ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿರುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಕಾರ್ಯಚರಿಸುತ್ತಿರುವ ಎಲ್ಲಾ ರಿಕ್ರಿಯೇಷನ್ ಕ್ಲಬ್ ಗಳನ್ನು ಮುಂದಿನ ಆದೇಶದವರೆಗೆ ಮುಚ್ಚಲು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಬಂಟ್ವಾಳ, ಬಿ.ಸಿ ರೋಡ್, ಮೆಲ್ಕಾರ್, ಸಿದ್ದಕಟ್ಟಿ, ಉಜಿರೆ, ಬೆಳ್ತಂಗಡಿ ವೇಣೂರು, ಮಡಂತ್ಯಾರು, ಜಾಲ್ಸೂರು, ಪುತ್ತೂರು, ನೆಲ್ಯಾಡಿ ಕಡೆಗಳಲ್ಲಿ ಕಾರ್ಯಾಚರಿಸುತ್ತಿರುವ ರಿಕ್ರಿಯೇಷನ್ ಕ್ಲಬ್ ಗಳಲ್ಲಿ ಇಸ್ವೀಟ್ ಕಾರ್ಡ್ ಗಳನ್ನು ಆಟವಾಡುತ್ತಿರುವ ವೇಳೆ, ಕಾರ್ಡ್ ಗಳನ್ನು ಒಬ್ಬರು ಮತ್ತೊಬ್ಬರಿಗೆ ನೀಡುತ್ತಿರುವುದರಿಂದ ಕೊರೊನಾ ವೈರಾಣು ಕಾಯಿಲೆ ಹರಡುವ ಸಾಧ್ಯತೆಗಳಿರುವುದರಿಂದ ಕ್ಲಬ್ ಗಳನ್ನು ಮುಚ್ಚಲು ಆದೇಶ ಮಾಡಿರುತ್ತಾರೆ
1. ರಿಕ್ರಿಯೇಷನ್ ಕ್ಲಬ್ ಗಳಲ್ಲಿ ಇಸ್ಪಿಟ್ ಆಡುವಾಗ ಕನಿಷ್ಟ 1 ಮೀ ಸಾಮಾಜಿಕ ಅಂತರ ಸಾಧ್ಯತೆ ಇರುವುದಿಲ್ಲ.
2.ಇಸ್ಪೀಟ್ ಕಾರ್ಡ್ ಗಳಲ್ಲಿ ಆಡುವಾಗ ಒಬ್ಬರಿಂದ ಒಬ್ಬರಿಗೆ ಕಾರ್ಡುಗಳನ್ನು ಹಂಚುವ ಸಂದರ್ಭದಲ್ಲಿ ಸೋಂಕಿತ ವ್ಯಕ್ತಿ ಇದ್ದಲ್ಲಿ ಅವರ ಮೂಲಕ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ.
3. ಆಟದಲ್ಲಿ ಭಾಗವಹಿಸುವ ವ್ಯಕ್ತಿಗಳಲ್ಲಿ ಆಟದ ಕಡೆ ಮನಸ್ಸನ್ನು ಕೇಂದ್ರೀಕರಿಸುವುದರಿಂದ ಅದರಲ್ಲಿ ಉದ್ವೇಗ, ಕೋಪ, ಆತಂಕಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ರಿಕ್ರಿಯೇಷನ್ ಕ್ಲಬ್ ಗಳಲ್ಲಿ ಭಾಗವಹಿಸಿದ ವ್ಯಕ್ತಿಗಳು ಮಾಸ್ಕ್, ಸ್ಯಾನಿಟೈಸರ್ ಉಪಯೋಗಿಸುವ ಸಾಧ್ಯತೆ ಕಡಿಮೆ ಇರುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ.
ರಿಕ್ರ್ರಿಯೇಷನ್ಸ್ ಕ್ಲಬ್ ಗೆ ಯಾವುದೇ ರೀತಿಯ ಎಸ್‌ಓಪಿ ಇಲ್ಲದಿರುವುದರಿಂದ ಸದಸ್ಯರನ್ನು ನಿಯಂತ್ರಣಕ್ಕೆ ಒಳಪಡಿಸ ಸಾಧ್ಯವಿರುವುದರಿಂದ ಕೋವಿಡ್ ೧೯ ಸಾಂಕ್ರಾಮಿಕ ರೋಗಗಳು ಸಂಪೂರ್ಣ ನಿಯಂತ್ರಣಕ್ಕೆ ಬರುವ ತನಕ ಈ ರಿಕ್ರಿಯೇಷನ್ ಲೈಟ್ ಗಳಲ್ಲಿ ‘ಇಸ್ಪೀಟ್ ಆಟಗಳ ಜೊತೆಗೆ ಇತರ ಯಾವುದೇ ಕಾರ್ಯ ಚಟುವಟಿಕೆಗಳು ನಡೆಸದಂತೆ ಕ್ರಮ ಕೈಗೊಳ್ಳುವುದು ಅತೀ ಅಗತ್ಯವಿರುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ – ೧೯ ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕಾಲಕಾಲಕ್ಕೆ ಎಲ್ಲಾ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿರುತ್ತದೆ.
ಜಿಲ್ಲೆಯಲ್ಲಿ ಹೆಚ್ಚಿನ ಎಲ್ಲಾ ನಿರ್ಬಂಧಗಳನ್ನು ಸಡಿಲಿಸಲಾಗಿದ್ದರೂ ಕೂಡಾ ಸಾಮಾಜಿಕ, ರಾಜಕೀಯ, ಮನೋರಂಜನಾ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಚಟುವಟಿಕೆಗಳಿಗೆ ನಿರ್ಬಂಧವು ಮುಂದುವರೆದಿರುತ್ತದೆ. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಂದೇ ಕಡೆ ಜಮಾವಣೆ ಆಗುವುದನ್ನು ನಿರ್ಬಂಧಿಸಲಾಗಿದೆ.