ಬೈಂದೂರು: ಪೊಲೀಸ್ ದೂರು ನೀಡಿದಕ್ಕೆ ವ್ಯಕ್ತಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ
ಬೈಂದೂರು ಸೆ.14(ಉಡುಪಿ ಟೈಮ್ಸ್ ವರದಿ): ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ನಾಗೂರಿನ ವೆಂಕಟೇಶ್ ದೇವಾಡಿಗ ಅವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ವೆಂಕಟೇಶ್ ಅವರ ಅಕ್ಕನ ಮಗ ಪ್ರಮೋದ್ ಎಂಬವನು ಬೆಂಗಳೂರಿನಲ್ಲಿದ್ದು ವೆಂಕಟೇಶ್ ಅವರಿ ಮೊಬೈಲ್ ಗೆ ಕರೆ ಮಾಡಿ ನೀನು ನಿನ್ನ ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂದು ಬೈದು ಬೆದರಿಕೆ ಹಾಕುತ್ತಿದ್ದನು. ಅಲ್ಲದೆ, ಸೆ.6 ರಂದು ಮಧ್ಯಾಹ್ನದ ವೇಳೆ ವೆಂಕಟೇಶ್ ಅವರು ತಮ್ಮ ದ್ವಿಚಕ್ರ ವಾಹನ ದಲ್ಲಿ ಕಿರಿಮಂಜೇಶ್ವರಕ್ಕೆ ಹೋಗಿ ವಾಪಾಸ್ಸು ಮನೆಗೆ ಬರುತ್ತಿರುವಾಗ ಕಿರಿಮಂಜೇಶ್ವರ ಮೂಕಾಂಬಿಕಾ ಟಿಂಬರ್ಸ ಎದುರು ಆಪಾದಿತರಾದ ಶಿವರಾಜ ಮತ್ತು ಸಂಜೀವ ಎಂಬವರು ವೆಂಕಟೇಶ್ ಅವರ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿ ಪ್ರಮೋದನ ಮೇಲೆ ಯಾಕೆ ಠಾಣೆಯಲ್ಲಿ ದೂರು ನೀಡಿದ್ದಿಯಾ ಎಂದು ಹೇಳಿ ಹಲ್ಲೆ ಮಾಡಿ , ದ್ವಿಚಕ್ರ ವಾಹನವನ್ನು ಚರಂಡಿಗೆ ದೂಡಿ ಜಖಂಗೊಳಿಸಿ ,ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.