ಮನೆ ಖರೀದಿಸುವವರಿಗೆ ಸಿಹಿ ಸುದ್ಧಿ ನೀಡಿದ ಬಿ.ಎಸ್. ಯಡಿಯೂರಪ್ಪ!
ಬೆಂಗಳೂರು: ಮಧ್ಯಮ ವರ್ಗದವರಿಗೆ ಕೈಗೆಟಕುವ ದರದಲ್ಲಿ ಮನೆಗಳು ಸಿಗುವಂತೆ ಮಾಡಲು ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು 35 ಲಕ್ಷದವರೆಗಿನ ಹೊಸ ಅಪಾರ್ಟ್ ಮೆಂಟ್ ಗಳ ಮುದ್ರಾಂಕ ಶುಲ್ಕವನ್ನು ಕಡಿತಗೊಳಿಸಲು ನಿರ್ಧರಿಸಿದೆ.
ನಿನ್ನೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮುದ್ರಾಂಕ ಮತ್ತು ದಾಖಲಾತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಭೆಯಲ್ಲಿ ಮುಖ್ಯಮಂತ್ರಿಗಳು, ಮೊದಲ ಬಾರಿಗೆ ದಾಖಲಾತಿ ಮಾಡಿಕೊಳ್ಳುವ 20 ಲಕ್ಷಕ್ಕಿಂತ ಕಡಿಮೆ ವೆಚ್ಚದ ಅಪಾರ್ಟ್ ಮೆಂಟ್ ಗಳ ಮುದ್ರಾಂಕ ಶುಲ್ಕವನ್ನು ಶೇಕಡಾ 5ರಿಂದ ಶೇಕಡಾ 2ಕ್ಕೆ ಇಳಿಸಲು ಆದೇಶ ನೀಡಿದರು ಎಂದು ತಿಳಿದುಬಂದಿದೆ.
ಅದೇ ರೀತಿ 21 ಲಕ್ಷದಿಂದ 35 ಲಕ್ಷದವರೆಗಿನ ಅಪಾರ್ಟ್ ಮೆಂಟ್ ಗಳ ಮುದ್ರಾಂಕ ಶುಲ್ಕವನ್ನು ಶೇಕಡಾ 5ರಿಂದ ಶೇಕಡಾ 3ಕ್ಕೆ ಇಳಿಸಲು ಕೂಡ ಸೂಚಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಕೋವಿಡ್-19 ನಿಂದಾಗಿ ಮುದ್ರಾಂಕ ಮತ್ತು ದಾಖಲಾತಿ(Stamps and Registration department) ಇಲಾಖೆಗೆ ಆದಾಯದಲ್ಲಿ ಅದರ ನಿಗದಿತ ಗುರಿಗಿಂತ 3 ಸಾವಿರದ 524 ಕೋಟಿ ರೂಪಾಯಿಗಳಷ್ಟು ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 12 ಸಾವಿರದ 655 ಕೋಟಿ ರೂಪಾಯಿಗಳ ಗುರಿ ಹೊಂದಲಾಗಿದೆ.