ಪುಂಡು ಪೋಕರಿಯಂತೆ ಮಾತಾಡಿದರೆ ಗೌರವ ಉಳಿಯುವುದಿಲ್ಲ: ಸಿ.ಟಿ ರವಿ ವಿರುದ್ಧ ಗುಂಡೂರಾವ್ ವಾಗ್ದಾಳಿ
ಬೆಂಗಳೂರು ಸೆ.13: ಸಿದ್ದರಾಮಯ್ಯರ ಬಗ್ಗೆ ಕೀಳಾಗಿ ಮಾತಾಡುವ ರವಿ ತಮ್ಮ ಯೋಗ್ಯತೆಯೇನು ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲಿ. ಪುಂಡು ಪೋಕರಿಯಂತೆ ಮಾತಾಡಿದರೆ ಗೌರವ ಉಳಿಯುವುದಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಿರುದ್ಧ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, `ಕೆಲವರಿಗೆ ದೊಡ್ಡವರನ್ನು ತೆಗಳಿ ದೊಡ್ಡವರೆನಿಸಿಕೊಳ್ಳುವ ಚಟವಿರುತ್ತದೆ. ಆ ಚಟ ಸಿ.ಟಿ ರವಿಗೂ ಇದೆ. ಸಿದ್ದರಾಮಯ್ಯರ ರಾಜಕೀಯ ಅನುಭವ, ಹಿರಿತನ ಮತ್ತು ಯೋಗ್ಯತೆ ಈ ನಾಡಿಗೆ ತಿಳಿದಿದೆ. ಸಿದ್ದರಾಮಯ್ಯರ ಬಗ್ಗೆ ಕೀಳಾಗಿ ಮಾತಾಡುವ ರವಿ ತಮ್ಮ ಯೋಗ್ಯತೆಯೇನು ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲಿ. ಪುಂಡು ಪೋಕರಿಯಂತೆ ಮಾತಾಡಿದರೆ ಗೌರವ ಉಳಿಯುವುದಿಲ್ಲ’ ಎಂದು ಹೇಳಿದ್ದಾರೆ.
`ವಿಪಕ್ಷ ನಾಯಕ ಸಿದ್ದರಾಮಯ್ಯರ ಬಗ್ಗೆ ಅತ್ಯಂತ ತುಚ್ಛವಾಗಿ ಮಾತಾಡಿರುವ ಸಿಟಿ ರವಿ ತಮ್ಮ ಸಂಸ್ಕಾರವೇನು ಎಂಬುದನ್ನು ತೋರಿಸಿಕೊಂಡಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವವರು ತಾವು ಬಳಸುವ ಭಾಷೆಯ ಮೇಲೆ ಹಿಡಿತವಿರಬೇಕು. ಸಿ.ಟಿ ರವಿ ಸಾರ್ವಜನಿಕ ಜೀವನದಲ್ಲಿರುವವರು, ಜೊತೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಈ ಸ್ಥಾನದ ಘನತೆಗೆ ತಕ್ಕ ಮಾತಾಡಲಿ’ ಎಂದು ಸಲಹೆ ನೀಡಿದ್ದಾರೆ.
‘ಸಿಟಿ ರವಿಯವರಿಗೆ ‘ಲೂಟಿ ರವಿ’ ಎಂಬ ಅನ್ವರ್ಥನಾಮ ಇಟ್ಟಿದ್ದು ಸಿದ್ದರಾಮಯ್ಯರಲ್ಲ. ಸ್ವತಃ ಅವರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೇ ರವಿಯವರನ್ನು ಲೂಟಿ ರವಿ ಎನ್ನುತ್ತಾರೆ. ಇದನ್ನು ಸಿದ್ದರಾಮಯ್ಯ ಹೇಳಿದ್ದೇ ರವಿಯವರಿಗೆ ಚೇಳು ಕಡಿದಂತಾಗಿದೆ. ಹಾಗಾಗಿ ಸಿದ್ದರಾಮಯ್ಯರ ವಿರುದ್ಧ ಕೀಳು ಪದಪ್ರಯೋಗ ಮಾಡಿ ರವಿ ತಮ್ಮ ಹೊಲಸು ನಾಲಗೆ ಪ್ರದರ್ಶಿಸಿದ್ದಾರೆ’ ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.