ಶಿರ್ವ: ವಿದ್ಯುತ್ ಕಂಬ ಹೊತ್ತೊಯ್ಯುತ್ತಿದ್ದಾಗ ಕಾರು ಡಿಕ್ಕಿ- ನಾಲ್ವರಿಗೆ ಗಾಯ
ಶಿರ್ವ ಸೆ.13: ವಿದ್ಯುತ್ ಟ್ರಾನ್ಸ್ ಫಾರ್ಮರ್ ಅಳವಡಿಸಲು ಮೆಸ್ಕಾಂ ಗುತ್ತಿಗೆ ಕಾರ್ಮಿಕರು ಕಂಬ ಹೊತ್ತೊಯ್ಯುತ್ತಿದ್ದಾಗ ಕಾರೊಂದು ಡಿಕ್ಕಿ ಹೊಡೆದು ನಾಲ್ವರು ಕಾರ್ಮಿಕರು ಗಾಯಗೊಂಡ ಘಟನೆ ಕಟಪಾಡಿ ಶಿರ್ವ ಬೆಳ್ಮಣ್ ಮುಖ್ಯರಸ್ತೆಯ ನ್ಯಾರ್ಮ ಸೇತುವೆಯ ಬಳಿ ಇಂದು ಬೆಳಿಗ್ಗೆ ನಡೆದಿದೆ.
ಗಾಯಗೊಂಡ ಕಾರ್ಮಿಕರನ್ನು ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೇತುವೆ ಬಳಿ ರಸ್ತೆ ಬಂದ್ ಮಾಡಿ ಕಾರ್ಮಿಕರು ವಾಹನದಿಂದ ಕಂಬವನ್ನು ಇಳಿಸಿ ವಿದ್ಯಾ ಲೇಔಟ್ ಬಳಿ ಹೋಗಲು ಕಂಬ ಹೊತ್ತೊಯ್ಯುತ್ತಿದ್ದ ವೇಳೆ ನೇರವಾಗಿ ಕಾರೊಂದು ಬಂದಿದ್ದು, ಮೆಸ್ಕಾಂ ಸಿಬಂದಿ ಕಾರು ನಿಲ್ಲಿಸಲು ಸೂಚನೆ ನೀಡಿದರೂ ಲೆಕ್ಕಿಸದೆ ಮುನ್ನುಗ್ಗಿದ ಪರಿಣಾಮ ಕಾರು ಕಂಬಕ್ಕೆ ಡಿಕ್ಕಿ ಹೊಡೆದು ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ. ವಿದ್ಯುತ್ ಕಂಬ ಕಾರಿನ ಮೇಲೆ ಬಿದ್ದುದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.