ಇಂದ್ರಾಳಿ: ರಸ್ತೆ ಗುಂಡಿಯಲ್ಲಿ ಕಾವಿ ತೊಟ್ಟು ಹೊರಳಾಡಿ ವಿಭಿನ್ನ ಪ್ರತಿಭಟನೆ
ಉಡುಪಿ: (ಉಡುಪಿ ಟೈಮ್ಸ್ ವರದಿ) ರಾಷ್ಟ್ರೀಯ ಹೆದ್ದಾರಿ ಇಂದ್ರಾಳಿ ರೈಲ್ವೆ ಸೇತುವೆ ಬಳಿ ಸಂಪೂರ್ಣ ಹದಗೆಟ್ಟಿರುವ ರಸ್ತೆ ದುರಸ್ಥಿಯನ್ನು ವಿರೋಧಿಸಿ ಇಂದು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ರಸ್ತೆಯಲ್ಲಿ ಉಂಟಾಗಿರುವ ಹೊಂಡಾಗುಂಡಿಗಳಲ್ಲಿ ತುಂಬಿರುವ ಕೆಸರು ನೀರಿನಲ್ಲಿ ಎಡೆ ಸ್ನಾನ ಮಾಡುವ ಮೂಲಕ ಪ್ರತಿಭಟನೆ ನಡೆಸಿದ ಅವರು, ರಸ್ತೆ ಅವ್ಯವಸ್ಥೆ ಬಗ್ಗೆ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಇದೀಗ ಇಂದ್ರಾಳಿ ರಸ್ತೆಯಲ್ಲಿ ಎಡೆ ಸ್ನಾನ ಮಾಡಿ ಪ್ರತಿಭಟನೆ ನಡೆಸಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ರಸ್ತೆ ಹಲವು ಸಮಯದಿಂದ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸುವಾಗ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಈ ಸ್ಥಳವು ಅಪಘಾತ ವಲಯವಾಗಿ ಮಾರ್ಪಟ್ಟಿದ್ದು, ಸಮಸ್ಯೆಯ ಕುರಿತು ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಇದುವರೆಗೂ ಗಮನ ಹರಿಸಿಲ್ಲ. ಸಮಸ್ಯೆಗಳು ಉಲ್ಭಣಗೊಳ್ಳುತ್ತಿವೆ ಆದರೂ ಸಂಬಂಧ ಪಟ್ಟ ಯಾರೂ ಈ ಕಡೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಹನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.