ಉಡುಪಿ: ಜೆಇಇ ಮತ್ತು ನೀಟ್ ಪರೀಕ್ಷೆಯನ್ನು ಮುಂದೂಡಲು ಕಾಂಗ್ರೆಸ್ ಆಗ್ರಹ

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರ ಜರಗಿಸಲು ನಿರ್ಧರಿಸಿರುವ ಜೆಇಇ ಮತ್ತು ನೀಟ್ ಪರೀಕ್ಷೆಯನ್ನು ಮುಂದೂಡಲು ಮಾನ್ಯ ಕರ್ನಾಟಕ ಸರಕಾರದ ರಾಜ್ಯಪಾಲರಿಗೆ ಉಡುಪಿ ಜಿಲ್ಲಾಧಿಕಾರಿಯವರ ಮೂಲಕ ಮನವಿಯನ್ನು ಸಲ್ಲಿಸಲಾಯಿತು.


ಇಡೀ ದೇಶದಲ್ಲಿ ಕೋವಿಡ್-೧೯ ಸಾಂಕ್ರಮಿಕ ರೋಗ ತಾಂಡವವಾಡುತ್ತಿರುವ ಈ ಹೊತ್ತು ಕೇಂದ್ರ ಸರಕಾರವು ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ಜರಗಿಸಲು ಮುಂದಾಗಿರುವುದು ಒಂದು ಮೂರ್ಖತನದ ನಿರ್ಧಾರವಾಗಿರುತ್ತದೆ. ಸಾಂಕ್ರಾಮಿಕ ರೋಗ ಹರಡುವ ಈ ಹೊತ್ತು ವಿದ್ಯಾರ್ಥಿಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವುದು ಕೂಡಾ ವಾಹನಗಳ ಅಲಭ್ಯತೆಯಿಂದ ಕಷ್ಟಸಾಧ್ಯ ಅಲ್ಲದೆ ವಸತಿ ಸೌಕರ್ಯ ಲಭ್ಯವಾಗುವುದು ಕಷ್ಟ ಸಾಧ್ಯ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಹೆತ್ತವರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ.


ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾದ ಸೋನಿಯಾ ಗಾಂಧಿಯವರು ವಿರೋಧ ಪಕ್ಷಗಳ ಮುಖ್ಯಮಂತ್ರಿಗಳ ವರ್ಚುವಲ್ ಮೀಟಿಂಗ್‌ನಲ್ಲಿ ಈ ವಿಷಯವನ್ನು ಎತ್ತಿದಾಗ ಎಲ್ಲಾ ಮುಖ್ಯಮಂತ್ರಿಗಳು ಇದಕ್ಕೆ ವಿರೋಧ ಸೂಚಿಸಿದ್ದಾರೆ ಮತ್ತು ಕೇಂದ್ರ ಸರಕಾರ ಈ ಪರೀಕ್ಷೆಗಳನ್ನು ಮಾಡುವ ನಡೆಯನ್ನು ವಿರೋಧಿಸಿದ್ದಾರೆ ಮತ್ತು ಅವರು ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ನಿರ್ಧಾರವನ್ನು ಕೈಗೊಂಡಿದ್ದಾರೆ.

ರಾಹುಲ್ ಗಾಂಧಿ ಕೂಡಾ ಕೇಂದ್ರ ಸರಕಾರದ ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಮುಂದೂಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ದೇಶದಾದ್ಯಂತ ಇರುವ ಪ್ರವಾಹ ಕಾರಣದಿಂದಾಗಿ ಕೂಡಾ ಸಮಸ್ಯೆಗಳನ್ನು ತೀವ್ರವಾಗಿ ಗಮನಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೇಂದ್ರ ಸರಕಾರ ಜರಗಿಸಲು ನಿರ್ಧರಿಸಿರುವ ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದೆ.


ಈ ಸಂದರ್ಭದಲ್ಲಿ ದಿನೇಶ್ ಪುತ್ರನ್, ವೆರೋನಿಕಾ ಕರ್ನೇಲಿಯೋ, ಪ್ರಖ್ಯಾತ್ ಶೆಟ್ಟಿ, ಶಬ್ಬೀರ್ ಅಹ್ಮದ್, ಹರೀಶ್ ಕಿಣಿ, ಕೆ. ಅಣ್ಣಯ್ಯ ಶೇರಿಗಾರ್, ಕೀರ್ತಿ ಶೆಟ್ಟಿ, ಗೀತಾ ವಾಗ್ಳೆ, ವಿಶ್ವಾಸ್ ವಿ. ಅಮೀನ್, ಯತೀಶ್ ಕರ್ಕೇರಾ, ಜನಾರ್ದನ ಭಂಡಾರ್ಕಾರ್, ನಿತ್ಯಾನಂದ ಕೆಮ್ಮಣ್ಣು, ಕ್ರಿಸ್ಟಿನ್ ಡಿ’ಅಲ್ಮೇಡಾ, ವಿಜಯ ಪೂಜಾರಿ, ರಮೇಶ್ ಕಾಂಚನ್, ಬಾಲಕೃಷ್ಣ ಪೂಜಾರಿ, ಪ್ರಶಾಂತ್ ಜತ್ತನ್ನ, ಉಪೇಂದ್ರ ಮೆಂಡನ್, ನಾರಾಯಣ ಕುಂದರ್, ಗಣೇಶ್ ನೆರ್ಗಿ, ಹಮದ್, ಸಂಜಯ್ ಆಚಾರ್ಯ, ದೇವದಾಸ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!