ಪಟ್ಲ ಫೌಂಡೇಶನ್ ಅಮೇರಿಕ ಘಟಕ: ಶ್ರೀಧರ ಹಂದೆಯವರಿಗೆ ಯಕ್ಷಧ್ರುವ ಕಲಾಗೌರವ
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ ಟ್ರಸ್ಟ್ ಇದರ ಅಮೇರಿಕಾ ಘಟಕದ ವಾರ್ಷಿಕ ಕಾರ್ಯಕ್ರಮ ಈ ಬಾರಿ ಪಾವಂಜೆ ಶ್ರೀಸುಬ್ರಹ್ಮಣ್ಯ ಕ್ಷೇತ್ರದ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಪಟ್ಲ ಟ್ರಸ್ಟ್ ಯಕ್ಷಗಾನ ಕಲಾವಿದರಿಗಾಗಿ ಮಾಡುತ್ತಿರುವ ಸೇವೆಯ ಬಗ್ಗೆ ಮತ್ತು ಪಟ್ಲ ಸತೀಶ್ ಶೆಟ್ಟಿಯವರ ಕಾರ್ಯ ಯೋಜನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಶ್ವವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಸಂಸ್ಥಾಪಕ, ಬಡಗುತಿಟ್ಟಿನ ಹಿರಿಯ ಯಕ್ಷಗಾನ ವಿದ್ವಾಂಸಕರು, ಪ್ರಪ್ರಥಮ ಬಾರಿಗೆ ಸಾಲಿಗ್ರಾಮ ಮಕ್ಕಳ ಮೇಳವನ್ನು ಅಮೇರಿಕಾ ದೇಶಕ್ಕೆ ಪರಿಚಯಿಸಿದ ನಿವೃತ್ತ ಮುಖ್ಯೋಪಾಧ್ಯಾಯರೂ ಆಗಿರುವ ಹೆಚ್ ಶ್ರೀಧರ ಹಂದೆ ಕೋಟ ಇವರಿಗೆ ಯಕ್ಷಧ್ರುವ ಕಲಾ ಗೌರವವನ್ನು ಅಮೇರಿಕಾ ಘಟಕದ ವತಿಯಿಂದ ಅರ್ಪಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಮೇರಿಕಾ ಘಟಕದ ಅಧ್ಯಕ್ಷರಾದ ಡಾ.ಅರವಿಂದ ಉಪಾಧ್ಯಾಯರವರು ಕರಾವಳಿಯ ಗಂಡುಕಲೆ ಯಕ್ಷಗಾನ ಉಳಿಯಬೇಕಾದರೆ ಕಲಾವಿದರನ್ನು ಪ್ರೋತ್ಸಾಹಿಸುವುದರೊಂದಿಗೆ ಪ್ರಸ್ತುತ ಅವಧಿಯಲ್ಲಿ ಯಕ್ಷಗಾನದ ಮೂಲ ಸಂಪ್ರದಾಯ ಮತ್ತು ಪರಂಪರೆಯನ್ನು ಉಳಿಸಿಕೊಂಡು ಹೊಸತನವನ್ನು ತರುವಂತೆ ಪ್ರಯತ್ನಿಸಬೇಕು ಎಂದರು.
ಪಟ್ಲ ಫೌಂಡೇಶನ್ನ ಈವರೆಗಿನ ಸಾಧನೆಗಳು ಪಟ್ಲಯಾನದಲ್ಲಿ ಗ್ರಂಥರೂಪದಲ್ಲಿ ಬಿಡುಗಡೆ ಯಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿ
ಅಮೇರಿಕಾದಲ್ಲಿ ಯಕ್ಷಗಾನ ಪ್ರಿಯರಿಗೆ ಇದನ್ನು ಪಿಡಿಎಫ್ ಮೂಲಕ ವಿತರಿಸಲಾಗುವುದೆಂದರು. ಕಲಾವಿದರಿಗೆ ವಿಮೆಯ ಕೊಡುಗೆಯನ್ನು ಅಮೇರಿಕಾ ಘಟಕದ ಮೂಲಕ ನೀಡಲು ಪ್ರಯತ್ನಿಸಲಾಗುವುದೆಂದರು.
ಕೇಂದ್ರೀಯ ಸಮಿತಿಯ ವತಿಯಿಂದ ಅಮೇರಿಕಾ ಘಟಕದ ಅಧ್ಯಕ್ಷರಾದ ಡಾ. ಅರವಿಂದ ಉಪಾಧ್ಯಾಯರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಅಮೇರಿಕಾ ಘಟಕದ ಪ್ರಮುಖರು ಹಾಗೂ ಅಮೇರಿಕಾದ ಹ್ಯೂಸ್ಟನ್ನ ಬಯಲು ಪ್ರದೇಶದಲ್ಲಿ ಯಕ್ಷಗಾನವನ್ನು ಆಯೋಜಿಸಿದ್ದ ರೂವಾರಿ ವಾಸುದೇವ ಐತಾಳ, ಕಲ್ಕೂರ ಪ್ರತಿಷ್ಟಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಯಕ್ಷಗಾನ ವಿದ್ವಾಂಸರಾದ ಡಾ.ಎಂ.ಪ್ರಭಾಕರ ಜೋಶಿ, ಮಾರ್ಗದರ್ಶಕರುಗಳಾದ ಎಂ.ಎಲ್. ಸಾಮಗ, ಸುಧಾಕರ ಆಚಾರ್ಯ ಉಡುಪಿ, ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ, ಕೇಂದ್ರೀಯ ಸಮಿತಿಯ ಪದಾಧಿಕಾರಿಗಳಾದ ಸಿಎ ಸುದೇಶ್ ಕುಮಾರ್ ರೈ, ಡಾ.ಮನು ರಾವ್, ಪ್ರದೀಪ್ ಆಳ್ವ ಕದ್ರಿ, ರವಿ ಶೆಟ್ಟಿ
ಅಶೋಕನಗರ ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಅಮೇರಿಕಾದ ಯಕ್ಷಗಾನ ಪ್ರಿಯರಿಗೆ ಆಮೇರಿಕಾ ಘಟಕದ ವತಿಯಿಂದ ತೆಂಕುಬಡಗಿನ ಆಯ್ದ ಕಲಾವಿದರ ಕೂಡುವಿಕೆಯಿಂದ ಮಾಯಾ ತಿಲೋತ್ತಮೆ ಪ್ರಸಂಗವನ್ನು ಆನ್ಲೈನ್ ಯಕ್ಷಗಾನ ಬಯಲಾಟ ರೂಪದಲ್ಲಿ ಆಡಿ ತೋರಿಸಲಾಯಿತು.