ವೈದ್ಯಕೀಯ ವೆಚ್ಚ ಪಾವತಿ ರದ್ದು- ಕೊರಗ ಸಂಘಟನೆಯಿಂದ ಪ್ರತಿಭಟನೆ
ಉಡುಪಿ ಸೆ.12(ಉಡುಪಿ ಟೈಮ್ಸ್ ವರದಿ): ಕೊರಗ ಸಮುದಾಯದವರಿಗೆ ಸರಕಾರದಿಂದ ನೀಡಲಾಗುತ್ತಿದ್ದ ವೈದ್ಯಕೀಯ ವೆಚ್ಚ ಪಾವತಿ ಆದೇಶವನ್ನು ರದ್ದುಗೊಳಿಸಿರುವ ಆದೇಶವನ್ನು ಹಿಂಪಡೆದು ಕೊಳ್ಳುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಕೊರಗ ಸಂಘಟನೆ ವತಿಯಿಂದ ಇಂದು ಮಣಿಪಾಲ ಬಸ್ ನಿಲ್ದಾಣದಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿವರೆಗೆ ಹಕ್ಕೊತ್ತಾಯ ಜಾಥ ಹಾಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಮಣಿಪಾಲ ಬಸ್ ನಿಲ್ದಾಣದಲ್ಲಿ ದ.ಕ ಜಿಲ್ಲಾ ಕೊರಗ ಸಂಘಟನೆಯ ಅಧ್ಯಕ್ಷ ಸುಂದರ್ ಬೆಳುವಾಯಿ ಅವರು ಪ್ರತಿಭಟನೆಗೆ ಚಾಲನೆ ನೀಡಿದರು.
ಬಳಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಮೀಪ ನಡೆದ ಪ್ರತಿಭಟನಾ ಸಭೆಯಲ್ಲಿ ಉಡುಪಿಯ ಖ್ಯಾತ ಮನೋ ವೈದ್ಯ ಡಾ.ಪಿ.ವಿ ಭಂಡಾರಿ ಅವರು ಮಾತನಾಡಿ, ಮದ್ಯಪಾನದಿಂದ ಕೊರಗ ಸಮುದಾಯದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಅಧಿಕಾರಿಗಳು ಸೂಚಿಸಿರೋದಾಗಿ ಆದೇಶದಲ್ಲಿ ತಿಳಿಸಲಾಗಿದೆ. ಆದರೆ ಮೊಹಮ್ಮದ್ ಪೀರ್ ರವರ ವರದಿ ಬಳಿಕ ಸಮುದಾಯದ ಬಗ್ಗೆ ಯಾವುದೇ ಅಧ್ಯಯನ ಮಾಡದೆ, ಇದನ್ನು ಯಾವ ಆಧಾರದಲ್ಲಿ ಅಧಿಕಾರಿಗಳು ಹೇಳುತ್ತಾರೆ. ಇದಕ್ಕೆ ಅಧಿಕಾರಿಗಳು ಉತ್ತರ ನೀಡಬೇಕಾಗಿದೆ. ಕೊರಗ ಸಮುದಾಯದವರ ಜನಸಂಖ್ಯೆ ಕಡಿಮೆ ಆಗುತ್ತಿದೆ. ಇದಕ್ಕೆ ಕಾರಣ ಸರಕಾರ ಕೊರಗ ಸಮುದಾಯಕ್ಕೆ ನೀಡಬೇಕಾದ ಆರೋಗ್ಯದ ಸವಲತ್ತುಗಳನ್ನು ಸರಿಯಾಗಿ ನೀಡುತ್ತಿಲ್ಲ. ಇದರಿಂದಾಗಿ ಸಮುದಾಯದ ಜನರ ಆರೋಗ್ಯ ಕ್ಷೀಣಿಸುತ್ತಿದೆ ಎಂದರು.
ಕೊರಗ ಸಮುದಾಯದವರು ಅನೇಕ ಗಂಭೀರ ಕಾಯಿಲೆಗಳಿಂದ ತುತ್ತಾಗಿ ಸಾವನ್ನಪ್ಪಿದ್ದಾರೆ. ಆದರೆ ಅಧಿಕಾರಿಗಳು ಸಮುದಾಯದ ಜನರು ಮದ್ಯಪಾನದಿಂದ ಅನಾರೋಗ್ಯಕ್ಕೀಡಾಗಿ ಸಾವನ್ನಪುತ್ತಿದ್ದಾರೆ ಎಂದು ಹೇಳಿದ್ದಾರೆ. ಸರಕಾರ ಸಮುದಾಯಕ್ಕೆ ನೀಡಲಾಗುತ್ತಿದ್ದ ವೈದ್ಯಕೀಯ ವೆಚ್ಚದ ಆದೇಶವನ್ನು ಹಿಂಪಡೆದಿರುವುದು ಬಾಲಿಶವಾದ ನಿರ್ಧಾರ. ಇದು ಹಂತ ಹಂತವಾಗಿ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ನಿರ್ಧಾರವಾಗಿದೆ. ಮೊದಲು ಸರಕಾರ ಸರಕಾರಿ ಆಸ್ಪತ್ರೆಗಳನ್ನು ಸದೃಢಗೊಳಿಸಲಿ, ಸರಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಂತಾಗಲಿ. ಸರಕಾರಿ ಆಸ್ಪತ್ರೆಗಳು ಸದೃಢವಾಗಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂದು ಹೇಳಿದರು.
ಸರಕಾರ ಅನೇಕ ಉತ್ತಮ ಯೋಜನೆಗಳನ್ನು ತಂದಿದೆ ಆದರೆ ಅಧಿಕಾರಿಗಳು ಈ ಯೋಜನೆಗಳನ್ನು ಸರಿಯಾಗಿ ಕಾರ್ಯನಿರ್ವಹಿಸಲು ಬಿಡುತ್ತಿಲ್ಲ. ಆಯುಷ್ಮಾನ್ ಯೋಜನೆ ಇದೆ ಎನ್ನುತ್ತಾರೆ ಆದರೆ ಈ ಯೋಜನೆಯ ಲಾಭ ಪಡೆಯಲು ಜನ ಸಾಮಾನ್ಯರು ಅದರ ಕೋಡ್ ಗಾಗಿ ಪರದಾಡಬೇಕಾಗುತ್ತದೆ. ಅಂತಹುದರಲ್ಲಿ ಮುಂದೆ ಈ ಕೋಡ್ ನೀಡಲು ಕೂಡಾ ಕೊರಗ ಸಮುದಾಯವರಿಗೆ ನೀವು ಮದ್ಯಪಾನ ಮಾಡುತ್ತೀರ ನಿಮಗೆ ಕೋಡ್ ನೀಡಲು ಆಗುವುದಿಲ್ಲ ಎಂದು ಹೇಳಿದರೂ ಹೇಳಬಹುದು ಎಂದರು. ಇದೇ ವೇಳೆ ಅವರು ಇದು ಯಾವುದೇ ಪಕ್ಷದ ವಿರೋಧಿ ಹೋರಾಟ ಅಲ್ಲ ಇದು ಜನಸಾಮಾನ್ಯರ ಹೋರಾಟ ಕೊರಗ ಸಮುದಾಯದ ಈ ಹೋರಾಟದಲ್ಲಿ ಜೊತೆಗಿರುವುದಾಗಿ ಭರವಸೆ ನೀಡಿದರು.
ಬಳಿಕ ಮಾತನಾಡಿದ ಕೊರಗ ಸಮುದಾಯದ ಮುಖಂಡರು ಸಮುದಾಯಕ್ಕೆ ನೀಡಲಾಗುತ್ತಿದ್ದ ವೈದ್ಯಕೀಯ ವೆಚ್ಚವನ್ನು ಭರಿಸುವ ಸರಕಾರದ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಬಳಿಕ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಕೊರಗ ಸಮುದಾಯದ ಮುಖಂಡರಿಂದ ಮನವಿಯನ್ನು ಸ್ವೀಕರಿಸಿದರು. ಈ ವೇಳೆ ಅವರು ಮಾತನಾಡಿ, ವೈದ್ಯಕೀಯ ವೆಚ್ಚ ರದ್ದು ಮಾಡಿರುವ ಆದೇಶವನ್ನು ಹಿಂಪಡೆದು, ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವ ಬಗ್ಗೆ ಸಮುದಾಯದ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರುತ್ತೇನೆ. ಹಾಗೂ ಈ ಬಗ್ಗೆ ಮುಂದಿನ ಕ್ರಮವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕೊರಗ ಸಂಘಟನೆಯ ಅಧ್ಯಕ್ಷೆ ಗೌರಿ ಕೆಂಜೂರು, ದ.ಕ ಜಿಲ್ಲಾ ಕೊರಗ ಸಂಘಟನೆಯ ಅಧ್ಯಕ್ಷ ಸುಂದರ್ ಬೆಳುವಾಯಿ, ಕೊರಗ ಮುಖಂಡರಾದ ಬಾಬು ಪಾಂಗಳ, ಗಣೇಶ್ ಬಾರ್ಕೂರು, ಗಣೇಶ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.